ಬೆಂಗಳೂರು : ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿತ ದೂರು ಆಧರಿಸಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
34 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಮಾಡಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಬೆದರಿಕೆ ಹಾಕಿದ ಆರೋಪದಡಿ ವಿನಯ ಕುಲಕರ್ಣಿ ಆಪ್ತ ಅರ್ಜುನ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇತ್ತ ತನ್ನ ವಿಡಿಯೋ , ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಅವರು ಸಹ ಪ್ರತಿದೂರು ನೀಡಿದ್ದಾರೆ. ದೂರು ಆಧರಿಸಿ ಖಾಸಗಿ ಸುದ್ದಿ ವಾಹಿನಿ ಮತ್ತು ಸಂತ್ರಸ್ತೆ ವಿರುದ್ಧ ಸಂಜಯ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆ ಅನೇಕ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಸಂತ್ರಸ್ತೆ ಮೂಲಕ ನನ್ನ ವಿರುದ್ಧ ಸಂಚು ರೂಪಿಸಿ ಮಾನಹಾನಿ ಮಾಡಲಾಗಿದೆ ಎಂದು ವಿನಯ ಕುಲಕರ್ಣಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುದ ಶಾಸಕ ವಿನಯ ಕುಲಕರ್ಣಿ, ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಷಡ್ಯಂತ್ರ ಎಂದು ಹೇಳಿದ್ದಾರೆ. “ನಾನು ಆ ಮಹಿಳೆಯನ್ನು ಮುಟ್ಟಿದರೆ ಮಾಡಿದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆಯೇ. ಕೇವಲ ಎರಡು ಮೂರು ಸಲ ನಡೆದ ವೀಡಿಯೊ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು.ಕೆಲವು ಮಂದಿ ಹಿಂದಿನಿಂದ ಈ ರೀತಿ ಷಡ್ಯಂತ್ರ ಮಾಡಿಸುತ್ತಿದ್ದಾರೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.