ಬೆಳಗಾವಿ : ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಳವಾನ್ ಗಲ್ಲಿಯಲ್ಲಿ ನಿನ್ನೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿದ್ದು, ಒಟ್ಟು ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಕೆಟ್ ಆಟದ ಸಂದರ್ಭದಲ್ಲಿ ಯುವಕರ ನಡುವೆ ಜಗಳವಾಗಿ ಗಲಾಟೆ ಪ್ರಾರಂಭವಾಯಿತು. ನಂತರ ಅವರ ಪೋಷಕರು ಭಾಗಿಯಾಗಿದ್ದರು. ಎರಡು ಗುಂಪುಗಳ ತಲಾ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಲವಾರ್ ಪ್ರದರ್ಶಿಸಿದ ಆರೋಪದ ಮೇರೆಗೆ ಅಬ್ದುಲ್ ಎಂಬುವನನ್ನು ಬಂಧಿಸಲಾಗಿದೆ.

ಶಹಾಪುರ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದರು.
ಈ ಸಂಬಂಧ ಒಟ್ಟು 2 ಎಫ್ ಐಆರ್ ದಾಖಲಾಗಿದ್ದು, 10 ಮಂದಿಯನ್ನು ಬಂಧಿಸಲಾಗಿದೆ. ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತಷ್ಟು ಪರಿಶೀಲಿಸುತ್ತಿದ್ದೇವೆ ಮತ್ತು ಇತರರನ್ನು ಗುರುತಿಸಲಾಗುತ್ತಿದೆ. ನಗರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಳವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಸಂಬಂಧ ಶಹಾಪುರ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮುಸ್ಲಿಂ ಮತ್ತು ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಲಾಗಿದೆ. ತಲ್ವಾರ್ ಪ್ರದರ್ಶನ, ಕಲ್ಲು ತೂರಾಟ ಸಂಬಂಧ ಐಪಿಸಿ ಸೆಕ್ಷನ್ (IPC Sections) 143, 147, 148, 323, 324, 307, 354, 504, 506, 153A, 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 13 ಹಿಂದೂ ಯುವಕರ ಮೇಲೂ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149ರಡಿ ಪ್ರಕರಣ ದಾಖಲಿಸಲಾಗಿದೆ.

ಬೆಳಗಾವಿಯ ಅಳವಾನ್ ಗಲ್ಲಿಯ ಆದರ್ಶ ಮರಾಠಿ ವಿದ್ಯಾಮಂದಿರ ಶಾಲೆ ಮೈದಾನದಲ್ಲಿ ಗುರುವಾರ ಸಂಜೆ 4.30ಕ್ಕೆ ಅಪ್ರಾಪ್ತರು ಕ್ರಿಕೆಟ್ ಆಟ ಆಡಿದ್ದರು. ನಂತರ ಗೆದ್ದ ತಂಡದ ಮೇಲೆ ಮತ್ತೊಂದು ತಂಡದಿಂದ ಹಲ್ಲೆ ನಡೆದಿತ್ತು. ಘರ್ಷಣೆ ಮುಂದುವರಿದು ಸಂಜೆ 6 ಗಂಟೆಗೆ ಒಂದು ಯುವಕರ ಗುಂಪು ಕಲ್ಲು ತೂರಾಟ ಮಾಡಿತ್ತು. ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಲ್ಲು ತೂರದಂತೆ ಅಳವಾನ್ ಗಲ್ಲಿ ನಿವಾಸಿಗಳು ಎಚ್ಚರಿಕೆ ನೀಡಿದ್ದರು.

ಸಂಜೆ 6.15ಕ್ಕೆ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್ ಸ್ಥಳಕ್ಕೆ ಆಗಮಿಸಿದರು. ಪೊಲೀಸ್​ ಜೀಪ್​ನಲ್ಲಿ ಮಹಿಳಾ ಅಧಿಕಾರಿ ಆಗಮಿಸಿದ ವೇಳೆ ಯುವಕರ ಗುಂಪೊಂದು ತಲವಾರ್ ಎಸೆದು ಅಲ್ಲಿಂದ ಪರಾರಿಯಾಗಿದೆ.

ಕಲ್ಲು ತೂರಾಟದ ವೇಳೆ 8 ಜನ ಗಾಯಗೊಂಡಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಚಿಕಿತ್ಸೆ ಪಡೆದು ರಾತ್ರಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಂಜೆ 7 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ನಂತರ ರಾತ್ರಿ 7.30ಕ್ಕೆ ಶಹಾಪುರ ಪೊಲೀಸ್ ಠಾಣೆ ಬಳಿ ಜನ ಜಮಾವಣೆಯಾಗಿದ್ದರು.