
ಬೆಳಗಾವಿ: ನಿಪ್ಪಾಣಿಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಹಾನಿಯಾದ ಘಟನೆ ಶುಕ್ರವಾರ ನಡೆದಿದೆ. ಸ್ಥಳೀಯ ಎರಡು ಅಗ್ನಿಶಾಮಕ ವಾಹನಗಳು ಸೇರಿದಂತೆ, ಸಂಕೇಶ್ವರ, ಚಿಕ್ಕೋಡಿ, ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಿಂದ ಸೇರಿ ಸುಮಾರು ಏಳು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿವೆ.
ಸಂಜೆ 4 ಗಂಟೆಗೆ 24 ಟಿಪಿಎಚ್ ಬಾಯ್ಲರ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ ರೂ. 5 ರಿಂದ 6 ಕೋಟಿ ಹಾನಿ ಅಂದಾಜಿಸಲಾಗಿದೆ.
ಮಹಾರಾಷ್ಟ್ರದ ಹಮ್ಮಿದವಾಡಾದ ಸದಾಶಿವರಾವ ಮಂಡಲಿಕ ಶುಗರ್ ಮಿಲ್, ಕಾಗಲ್‌ನ ಛತ್ರಪತಿ ಶಾಹು ಸಹಕಾರಿ ಸಕ್ಕರೆ ಕಾರ್ಖಾನೆ, ಕಾಗಲ್‌ನ ನಗರಸಭೆ, ಸ್ಥಳೀಯ ನಗರಸಭೆ, ಚಿಕ್ಕೋಡಿ ಪುರಸಭೆ, ಸಂಕೇಶ್ವರ ಪುರಸಭೆ, ಹಿರಾಶುಗರ್ ಸಕ್ಕರೆ ಕಾರ್ಖಾನೆ, ಡಿಕೆಎಸ್‌ಎಸ್ ಕಾರ್ಖಾನೆ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.
ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಶಶಿಧರ ನೀಲಗಾರ, ಸ್ಥಳೀಯ, ಸಂಕೇಶ್ವರ ಹಾಗೂ ಚಿಕ್ಕೋಡಿ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಖಾನೆಯ ಸಿಬ್ಬಂದಿ ಹಾಗೂ ಕಾರ್ಮಿಕರು ಅಗ್ನಿ ನಂದಿಸಿದರು.
ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಮತ್ತು ಸಂಚಾಲಕರು, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.