ನವದೆಹಲಿ: ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದು ಜಾರಿಗೆ ಬಂದಿದೆ. ಹೊಸ ಕಾನೂನಿನ ಪ್ರಕಾರ ಹೊಸದಿಲ್ಲಿಯ ರೈಲ್ವೆ ನಿಲ್ದಾಣದ ಬಳಿ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬೀದಿ ವ್ಯಾಪಾರಿಯ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಗಿದೆ.

ಹೊಸ ಕ್ರಿಮಿನಲ್ ಕೋಡ್‌ನ ಸೆಕ್ಷನ್ 285ರ ಅಡಿಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ. ಈ ಕಾನೂನಿನ ಪ್ರಕಾರ ಯಾವುದೇ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸಂಚರಿಸುವ ಯಾವುದೇ ವ್ಯಕ್ತಿಗೆ ಅಪಾಯ ಅಥವಾ ಗಾಯವನ್ನು ಉಂಟು ಮಾಡಿದರೆ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸ ಬಹುದಾಗಿದೆ.

ಭಾನುವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನೀರಿನ ಬಾಟಲಿಗಳು ಮತ್ತು ಗುಟ್ಕಾ ಮಾರಾಟ ಮಾಡುವ ಬೀದಿ ವ್ಯಾಪಾರಿಯನ್ನು ಗುರುತಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಬೀದಿ ವ್ಯಾಪಾರಿಯ ತಾತ್ಕಾಲಿಕ ಅಂಗಡಿಯು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದನ್ನು ಸ್ಥಳಾಂತರಿಸಲು ಪೊಲೀಸ್‌ ಸಿಬ್ಬಂದಿ ಕೇಳಿಕೊಂಡರೂ ಒಪ್ಪದೇ ಇದ್ದಾಗ ಎಫ್ಐಆರ್ ದಾಖಲಿಸಲಾಗಿದೆ.

ಬೀದಿ ಬದಿ ವ್ಯಾಪಾರಿ ಭಾನುವಾರ ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದ ಬಳಿಯ ಪಾದಚಾರಿ ಮೇಲ್ಸೇತುವೆಯ ಕೆಳಗೆ ತನ್ನ ಅಂಗಡಿಯನ್ನು ನಿಲ್ಲಿಸಿದ್ದ ಎಂದು ಹೇಳಲಾಗಿದೆ. ಆ ವ್ಯಾಪಾರಿಯು ಬೀದಿಯಲ್ಲಿ ನೀರಿನ ಬಾಟಲಿ, ಬೀಡಿ ಮತ್ತು ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಆತನ ಅಂಗಡಿ ಅಡ್ಡಿಯಾಗುತ್ತಿತ್ತು. ರಸ್ತೆಯಿಂದ ಅಂಗಡಿಯನ್ನು ತೆರವುಗೊಳಿಸುವಂತೆ ಸಬ್ ಇನ್ಸ್‌ಪೆಕ್ಟರ್ ಆ ವ್ಯಾಪಾರಿ ಬಳಿ ಹಲವು ಬಾರಿ ಮನವಿ ಮಾಡಿದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವ್ಯಾಪಾರಿಯನ್ನು ಬಿಹಾರದ ಪಾಟ್ನಾ ಮೂಲದ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.