
ಬಾದಾಮಿ: ‘ಭೂ ಉತ್ಪನನದಲ್ಲಿ ಸೋಮವಾರ ಮತ್ತೆ ಐದು ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಹೇಳಿದರು.
ಇಲ್ಲಿನ ನಾಲ್ಕನೇ ಜೈನ ಬಸದಿ ಎದುರಿನ ಬೆಟ್ಟದ ಕೆಳಗೆ ಮತ್ತು ಅಗಸ್ಕೃತೀರ್ಥ ಹೊಂಡದ ದಂಡೆಯಲ್ಲಿ ತಿಂಗಳಿಂದ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಭೂ ಉತ್ಪನನ ಕಾರ್ಯವನ್ನು ನಡೆಸಿದೆ.
‘ಭೂ ಉತ್ಪನನ ಮಾಡಿದಾಗ ಚಿಕ್ಕ, ದೊಡ್ಡ ಗಾತ್ರದ ಮಣ್ಣಿನ ಮಡಿಕೆಗಳು ಲಭ್ಯವಾಗಿದ್ದು ಇನ್ನೂ ಹಲವಾರು ಭೂಮಿಯಲ್ಲಿವೆ. ಮೂರು ಒಂದು ಕಡೆ ಇದ್ದರೆ ಇನ್ನೆರಡು ಮಡಿಕೆಗಳು ಇನ್ನೊಂದು ಸ್ಥಳದಲ್ಲಿ ಪತ್ತೆಯಾಗಿವೆ. ಇಲಾಖೆಯ ತಂತ್ರಜ್ಞಾನ ಸಂಶೋಧಕರು ಬಂದ ನಂತರ ಹೊರಗೆ ತೆಗೆಯಲಾಗುವುದು’ ಎಂದು ತಿಳಿಸಿದರು.
‘ಈಗಾಗಲೇ ಬೆಟ್ಟದಲ್ಲಿ ಕೊರೆದ ಮೆಟ್ಟಿಲುಗಳು, ಎರಡು ಮಣ್ಣಿನ ಮಡಿಕೆಗಳು ಮತ್ತು 10 ತಾಮ್ರದ ನಾಣ್ಯಗಳು ದೊರಕಿವೆ. ಮಣ್ಣಿನ ಮಡಿಕೆಗಳಲ್ಲಿ ಮೂಳೆಗಳ ಸಂಗ್ರಹವಿದೆ. ಇವುಗಳ ಬಗ್ಗೆ ಸಂಶೋಧಕರ ಮೂಲಕ ಕಾಲ ನಿರ್ಣಯವಾಗಲಿದೆ’ ಎಂದು ತಿಳಿಸಿದರು.
ಮುಂದುವರಿದ ಭಾಗವಾಗಿ ಭೂ ಉತ್ಪನನ ಕಾರ್ಯ ನಡೆಯಲಿದ್ದು, ಬಾದಾಮಿ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವಂತಾಗಿದೆ. ಇತಿಹಾಸ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಆಹ್ವಾನಿಸುತ್ತಿವೆ.