ದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಕೇಂದ್ರದ ಮಾಜಿ ಸಚಿವ, ಸಂಸದ ಅನುರಾಗ್ ಸಿಂಗ್ ಠಾಕೂ‌ರ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿ ವಿವಿಧ ಖಾತೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದ ಅನುರಾಗ್‌ ಪಕ್ಷ ಸಂಘಟನೆಯಲ್ಲೂ ಪಳಗಿದ್ದು, ಯುವ ಸಮೂಹದಲ್ಲೂ ಜನಪ್ರಿಯರಾಗಿದ್ದಾರೆ. ಈ ಅವರನ್ನು ಅಧ್ಯಕ್ಷ ಮಾಡುವುದಕ್ಕಾಗಿಯೇ ಬಾರಿ ಅವರಿಗೆ ಯಾವುದೇ ಖಾತೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಬಹುತೇಕ ಜನವರಿಯಲ್ಲಿ ಆರಂಭವಾಗಬಹುದು, ಅದೇ ವೇಳೆ ಕರ್ನಾಟಕದಲ್ಲೂ ಬದಲಾವಣೆ ಆಗಲಿದೆ ಎಂದು ಮೂಲಗಳು ಹೇಳಿವೆ.

ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ರಾಷ್ಟ್ರೀಯ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು. ಪ್ರಧಾನಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಹುದ್ದೆಯ ಜತೆಗೆ ಯಾವುದಾದರೂ ರಾಜ್ಯದ ಉಸ್ತುವಾರಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಘಟಕದಲ್ಲಿ ಉತ್ಸಾಹದಿಂದ ಕೆಲಸ ಮಾಡದ ಹಾಗೂ ನಿಷ್ಕ್ರಿಯ ಪದಾಧಿಕಾರಿಗಳನ್ನು ಕೈಬಿಡುವ ಸಾಧ್ಯತೆ ಇದೆ. ಅನುಭವಿಗಳು ಮತ್ತು ಸಂಘಟನೆಗಾಗಿ ದುಡಿಯುವವರನ್ನು ನೇಮಿಸಲಾಗುವುದು. ಇದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಲು ಸಾಧ್ಯ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಕಾರಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ವರಿಷ್ಠರು ಗಮನಹರಿಸಲು ಸಾಧ್ಯವಾಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಅಧಿಕಾರ ಗ್ರಹಣವೂ ಆಗಿದೆ. ಇನ್ನು ಸಂಘಟನೆಯಲ್ಲಿ ಬದಲಾವಣೆಗಳ ಕಾರ್ಯಕ್ಕೆ ಕೈ ಹಾಕಲಿದ್ದಾರೆ. ಹಲವು ರಾಜ್ಯ ಘಟಕಗಳ ಅಧ್ಯಕ್ಷರ, ಪದಾಧಿಕಾರಿಗಳ ಬದಲಾವಣೆ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಪಕ್ಷದ ಒಳ ಜಗಳದ ಸಂಪೂರ್ಣ ಮಾಹಿತಿ ಅವರ ಗಮನದಲ್ಲಿದೆ.