ನವದೆಹಲಿ: ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಬುಧವಾರ ಘೋಷಿಸಿದ್ದಾರೆ.

ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. “ರಾಜಕೀಯದಿಂದ ನಿವೃತ್ತಿ, ನೂತನ ಪಕ್ಷ ಅಥವಾ ಮಿತ್ರ ಪಕ್ಷ ಎಂದು ನಾನು ಮೂರು ಆಯ್ಕೆಗಳ ಬಗ್ಗೆ ಹೇಳಿದ್ದೇನೆ. ನಾನು ನಿವೃತ್ತನಾಗುವುದಿಲ್ಲ; ನಾನು ಹೊಸ ಪಕ್ಷವನ್ನು ಬಲಪಡಿಸುತ್ತೇನೆ ಮತ್ತು ಈ ದಾರಿಯಲ್ಲಿ ದಾರಿಯಲ್ಲಿ ಉತ್ತಮ ಸ್ನೇಹಿತ ಭೇಟಿಯಾದರೆ ಅವರೊಂದಿಗೆ ಮುಂದುವರಿಯುತ್ತೇನೆ ಎಂದು ಚಂಪೈ ಸೊರೇನ್ ಹೇಳಿದರು.

ಜಾರ್ಖಂಡ್‌ನ ತಮ್ಮ ಪೂರ್ವಜರ ಗ್ರಾಮವಾದ ಸರೈಕೆಲಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು, “ನಾನು ಜಾರ್ಖಂಡದ ತುಳಿತಕ್ಕೊಳಗಾದವರ, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಬಡವರಿಗೆ ನ್ಯಾಯವನ್ನು ತಲುಪಿಸುವ ಧ್ಯೇಯವನ್ನು ಕೈಗೊಂಡಿದ್ದೇನೆ. ರಾಜ್ಯವನ್ನು ಆದರ್ಶವಾಗಿಸುವುದು ನನ್ನ ಗುರಿಯಾಗಿದೆ. ನಾನು ಈ ಗುರಿಯತ್ತ ಕೆಲಸ ಮಾಡುತ್ತಿದ್ದೇನೆ ಮತ್ತು ಮುಂದಿನ ಹಂತಗಳಿಗಾಗಿ ಗ್ರಾಮೀಣ ಸಮುದಾಯಗಳು ಕುತೂಹಲದಿಂದ ಕಾಯುತ್ತಿವೆ ಮತ್ತು ನನಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಹೇಮಂತ್ ಸೋರೆನ್ ಅವರನ್ನು ಇ.ಡಿ. ಬಂಧಿಸಿದ ನಂತರ ಚಂಪೈ ಸೊರೇನ್ ಅವರನ್ನು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. 67 ವರ್ಷದ ಬುಡಕಟ್ಟು ನಾಯಕ 1990 ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚಿಸುವ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ʼಜಾರ್ಖಂಡ್‌ ಹುಲಿʼ ಎಂದು ಕರೆಯಲ್ಪಡುತ್ತಾರೆ. ಜಾರ್ಖಂಡ್ ಅನ್ನು ಬಿಹಾರದ ದಕ್ಷಿಣ ಭಾಗದಿಂದ 2000 ರಲ್ಲಿ ಪ್ರತ್ಯೇಕಗೊಳಿಸಿ ಮತ್ತೊಂದು ರಾಜ್ಯವನ್ನಾಗಿ ಮಾಡಲಾಯಿತು.
“ಜೆಎಂಎಂನಿಂದ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಇದು ಜಾರ್ಖಂಡ್‌ ಭೂಮಿ… ನಾನು ನನ್ನ ವಿದ್ಯಾರ್ಥಿ ಜೀವನದಿಂದಲೂ ಹೋರಾಟ ಮಾಡಿದ್ದೇನೆ. ಪಕ್ಷದ ವರಿಷ್ಠ ಶಿಬು ಸೊರೇನ್ ನೇತೃತ್ವದಲ್ಲಿ ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಆಂದೋಲನದಲ್ಲಿ ಭಾಗವಹಿಸಿದ್ದೇನೆ” ಎಂದು ಚಂಪೈ ಸೊರೇನ್ ಹೇಳಿದ್ದಾರೆ.

ಆಗಸ್ಟ್ 18 ರಂದು X ನಲ್ಲಿನ ತಮ್ಮ ಪೋಸ್ಟ್ ಅನ್ನು ಉಲ್ಲೇಖಿಸಿ, “ನಾನು ಸರಿಯಾಗಿ ಭಾವಿಸಿದ್ದನ್ನು ನಾನು ಪೋಸ್ಟ್ ಮಾಡಿದ್ದೇನೆ. ಇಡೀ ದೇಶಕ್ಕೆ ನಾನು ಏನು ಯೋಚಿಸಿದೆ ಎಂದು ತಿಳಿದಿದೆ” ಎಂದು ಅವರು ಹೇಳಿದರು.
ಟ್ವೀಟ್‌ನಲ್ಲಿ ಅವರು, ಮುಖ್ಯಮಂತ್ರಿಯಾಗಿ ಕಹಿ ಅವಮಾನವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. ತುಂಬಾ ಅವಮಾನ ಮತ್ತು ತಿರಸ್ಕಾರದ ನಂತರ, ಪರ್ಯಾಯ ಮಾರ್ಗವನ್ನು ಹುಡುಕುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದರು. ಅಭೂತಪೂರ್ವ ಘಟನೆಗಳ ನಂತರ ತಮ್ಮನ್ನು ಜನವರಿ 31 ರಂದು ಜಾರ್ಖಂಡದ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ನನ್ನ ಅಧಿಕಾರಾವಧಿಯ ಮೊದಲ ದಿನದಿಂದ ಕೊನೆಯ ದಿನದವರೆಗೆ (ಜುಲೈ 3), ನಾನು ಸಂಪೂರ್ಣ ಶ್ರದ್ಧೆ ಮತ್ತು ಸಮರ್ಪಣೆಯೊಂದಿಗೆ ರಾಜ್ಯದ ಕಡೆಗೆ ನನ್ನ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ಕಳೆದ ನಾಲ್ಕು ದಶಕಗಳ ತನ್ನ ನಿಷ್ಕಳಂಕ ರಾಜಕೀಯ ಪಯಣದಲ್ಲಿ ಮೊದಲ ಬಾರಿಗೆ ಒಳಗಿನಿಂದ ನಾನು ನೋವನುಭವಿಸಿದ್ದೇನೆ ಎಂದು ಚಂಪೈ ಸೊರೇನ್ ಹೇಳಿದ್ದರು.