ಚಿಕ್ಕಬಳ್ಳಾಪುರ: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ನಿವೃತ್ತಿ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀರಪ್ಪ ಮೊಯ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿತ್ತು. ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಸೂಚಿಸಿರುವ ಅವರು, ಚುನಾವಣೆ ರಾಜಕೀಯದಿಂದ ದೂರ ಉಳಿದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದಾರೆ.

ನಗರದ ಪ್ರಶಾಂತನಗರದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಾ ರಾಮಯ್ಯರನ್ನು ಅಭ್ಯರ್ಥಿಯನ್ನಾಗಿ ಮಾಡಿದ ಎಐಸಿಸಿಗೆ ಅಭಿನಂಧನೆಗಳು. ನಮ್ಮ ಅಭ್ಯರ್ಥಿ ಈ ಬಾರಿ ಗೆದ್ದೇ ಗೆಲ್ಲುತ್ತಾರೆ. ಕಳೆದ ಬಾರಿ ಜೆಡಿಎಸ್ ನಂಬಿ ನಾವು ಕೆಟ್ಟೆವು, ಈಗ ಜೆಡಿಎಸ್ ಸಹವಾಸ ಮಾಡಿ ಬಿಜೆಪಿಯವರು ಕೆಡುತ್ತಾರೆ. ಜಿಲ್ಲೆಯಲ್ಲಿ ಐವರು ಶಾಸಕರು ನಮ್ಮವರಿದ್ದಾರೆ. ಇದು ಸುಸಂದರ್ಭ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಗೆಲ್ಲುವಂಥಹ ಎಲ್ಲಾ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಾ ರಾಮಯ್ಯ ಅಭ್ಯರ್ಥಿಯಾದ ದಿನವೇ ಅವರಿಗೆ ಬೆಂಬಲ ಸೂಚಿಸಿದ್ದೇನೆ. ಚುನಾವಣೆ ರಾಜಕೀಯದಿಂದ ನಾನು ದೂರ ಉಳಿದುಕೊಳ್ಳಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ನನ್ನಿಂದ ಏನು ಅಪಹರಿಸಿಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನನಗೆ ಅಧಿಕಾರ ಕೊಟ್ಟಿದೆ, ಪಕ್ಷಕ್ಕಾಗಿ ನಾನು ಏನಾದರೂ ಕೊಡಬೇಕು ಎಂದು ಹೇಳಿದರು.

ರಕ್ಷಾರಾಮಯ್ಯರಂಥ ಸೌಭಾಗ್ಯವಂತ ಯಾರು ಇಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಜಾತಿ‌, ಅದರಲ್ಲಿ ಎಲ್ಲಾ ಜಾತಿಗಳಿಗೂ ಅವಕಾಶ ಇದೆ. ಚಿಕ್ಕಬಳ್ಳಾಪುರ ಕ್ಷೇತ್ರ ಗೆದ್ದರೆ ಜಾತ್ಯತೀತತೆ ಜಯಭೇರಿ ಬಾರಿಸಿದಂತೆ. ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನನ್ನ ಅಭ್ಯರ್ಥಿ ಸ್ಥಾನ ಬಿಟ್ಟಿದ್ದೇನೆ, ಆದರೆ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ನಾನು ಏನೇ ಆಗಿರಲಿ ಸಾಯುವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ತಿಳಿಸಿದರು.

ರಕ್ಷಾರಾಮಯ್ಯ ಒಳ್ಳೆ ಕುಟುಂಬದಿಂದ ಬಂದಿದ್ದಾರೆ. ಈ ಚುನಾವಣೆಯಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆ. ಗೆದ್ದ ಮೇಲೆ ಹತ್ತು ವರ್ಷಗಳ ಕೆಲಸ ಮಾಡಬೇಕು. ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಬದ್ಧರಾಗಿರಬೇಕು. ಎಚ್.ಎನ್‌. ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಕ್ರಮ ವಹಿಸಬೇಕು. ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಕಿವಿಮಾತು ಹೇಳಿದರು.

ಹತ್ತು ವರ್ಷದ ಮೋದಿ ಆಡಳಿತದಲ್ಲಿ ಜನ ಕಂಗಾಲಾಗಿದ್ದಾರೆ, ದೇಶದಲ್ಲಿ ಆರ್ಥಿಕ ಕುಸಿತ ಆಗಿದೆ. ನರೇಂದ್ರ ಮೋದಿ ಅಪಪ್ರಚಾರ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಮೋದಿ ಹಾಗೂ ಅವರ ಬೆಂಬಲಿಗರು ಬಿಟ್ಟರೆ ಭಾರತದಲ್ಲಿ ಜನ ಅಸಂತುಷ್ಟರಾಗಿದ್ದಾರೆ. ಈ ಚುನಾವಣೆಯಲ್ಲಿ ಜನರಲ್ಲಿ ಅಸಂತುಷ್ಟತೆ ಸ್ಫೋಟ ಆಗುತ್ತದೆ. ಡಾ.ಕೆ. ಸುಧಾಕರ್ ಅವರನ್ನು ಜನರೇ ದೂರ ಇಟ್ಟಿದ್ದಾರೆ, ಅವರು ಜನರಿಂದ ದೂರ ಹೋಗಿಲ್ಲ. ನೀವು ಎಲ್ಲಿ ಕುಳಿತುಕೊಳ್ಳಬೇಕೋ ಅಲ್ಲಿ ಕುಳಿತುಕೊಳ್ಳಿ ಎಂದು ಕೂರಿಸಿದ್ದಾರೆ. ಆದರೆ ಸುಧಾಕರ್ ಮತ್ತೆ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.