Join The Telegram | Join The WhatsApp |
ಶಿಬಿರದ ಪ್ರಯೋಜನ ಪಡೆದ 15000 ಕ್ಕೂ ಹೆಚ್ಚು ಜನ
ಅಥಣಿ : ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಅಂಗವಾಗಿ ಕೆ.ಎಲ್.ಇ. ವಿಶ್ವವಿದ್ಯಾಲಯ, ಜವಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ. ಪ್ರಭಾಕರ ಬ. ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ ಹಾಗೂ ಕೆ.ಎಲ್.ಇ. ಅಂಗ ಸಂಸ್ಥೆಗಳು ಅಥಣಿ ಇವರ ಸಹಯೋಗದಲ್ಲಿ ಪಟ್ಟಣದ ಕೆ.ಎಲ್.ಇ. ಎಸ್.ಎಸ್.ಎಮ್.ಎಸ್. ಮಹಾವಿದ್ಯಾಲಯದಲ್ಲಿ ಇಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿದರು.
ಡಾ. ಪ್ರಭಾಕರ ಕೋರೆಯವರು ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಬರುವ ಮೂಲಕ ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅವರ ಸೇವೆ, ಸಾಧನೆ ಮೂಲಕ ಹೆಸರಾಗಿದ್ದಾರೆ. ಅವರ ಜನ್ಮದಿನದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಜನರಿಗೆ ನೆರವಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ. ಪ್ರಭಾಕರ ಕೋರೆಯವರಿಗೆ ದೇವರು ಇನ್ನೂ ಹೆಚ್ಚು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವುದರೊಂದಿಗೆ ಶುಭ ಹಾರೈಸಿದರು.
ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯರು, ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಬಸವರಾಜ ಆರ್. ಪಾಟೀಲ, ಡಾ. ಮಲ್ಲಿಕಾರ್ಜುನ ಜಿ. ಹಂಜಿ, ಅಲ್ಲಪ್ಪಣ್ಣಾ ನಿಡೋಣಿ, ಪ್ರಾಚಾರ್ಯರಾದ ಡಾ. ಬಿ.ಎಸ್. ಕಾಂಬಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುಮಾರು 15,000ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
Join The Telegram | Join The WhatsApp |