ಅಥಣಿ-
ತಾಲೂಕಿನ ನಂದಗಾಂವ ಗ್ರಾಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಮಹೋತ್ಸವದ ರಾಜಾಭಿಷೇಕ, ದೀಕ್ಷಾಕಲ್ಯಾಣ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿಯವರು ಪಾಲ್ಗೊಂಡು ಮಾತನಾಡಿದರು.
ಜೈನ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೇಲ್, ಮುನಿಮಹಾರಾಜರ ಸಂರಕ್ಷಣೆ ಸೇರಿದಂತೆ ಜೈನ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿ.ಎಂ. ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತಂದು, ಜೈನ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿಯವರು ಹೇಳಿದರು.
ಜೈನ ಧರ್ಮ ಪರಮ ಶ್ರೇಷ್ಠ ಧರ್ಮವಾಗಿದ್ದು. ಅಹಿಂಸಾ ತತ್ವವನ್ನು ಕಟ್ಟು ನಿಟ್ಟಾಗಿ ಅಳವಡಿಸಿಕೊಂಡ ಏಕೈಕ ಧರ್ಮವಾಗಿದೆ. ವಿಧಿವತ್ತಾಗಿ ವೈಭವದಿಂದ ನಡೆದ ಈ ಕಾರ್ಯಕ್ರಮ ನಾಡಿಗೆ ಹೆಸರಾಗಿದ್ದಲ್ಲದೇ ಭವಿಷ್ಯದಲ್ಲಿ ನಮಗೆಲ್ಲ ಶಾಂತಿ, ಸಮೃದ್ಧಿ ನೆಲೆಸಲು ದಿಕ್ಸೂಚಿಯಾಗಿದೆ ಎಂದರು. ಬಾಲಾಚಾರ್ಯ ೧೦೮ ಸಿದ್ಧಸೇನ್ ಮುನಿಮಹಾರಾಜರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಅಮೀತಸೇನ್ ಮುನಿಮಹಾರಾಜರು, ಶಾಂತಿನಾಥ ಉಪಾಧ್ಯಯ, ಶ್ರೇಯಾಂಶ ಉಪಾಧ್ಯಯ, ರಾವಸಾಬ ಬಿರಾದಾರಪಾಟೀಲ, ವಕೀಲ ರಾದ ಕಲ್ಲಪ್ಪ ವನಜೋಳ, ಮುತ್ತಪ್ಪ ಕಾತ್ರಾಳ, ಪುಷ್ಪಕ ಪಾಟೀಲ, ಶಾಂತಿನಾಥ ನಂದೇಶ್ವರ, ಸುರೇಶ ಮಾಯಣ್ಣವರ, ಪ್ರಕಾಶ ಸಕಲಕನವರ, ಸುಶೀಲ್‌ಕುಮಾರ ಪತ್ತಾರ, ಪ್ರದೀಪ ನಂದಗಾಂವ ಸೇರಿದಂತೆ ಹಲವು ಗಣ್ಯಮಾನ್ಯರು, ಜೈನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.