ಮಂಗಳೂರು : ತುಳುನಾಡಿನ ಅತ್ಯಂತ ಕಾರ್ಣಿಕ ಶಕ್ತಿ ಸ್ವಾಮಿ ಕೊರಗಜ್ಜನ ಮೊರೆ ಹೋಗಿರುವ ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮಾಂತರ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರು ಜುಲೈ 27ರಂದು ಸಂಜೆ 6:30 ಕ್ಕೆ ತಮ್ಮ ಇಷ್ಟಾರ್ಥ ಈಡೇರಿಕೆಗೆ ಕೋಲಸೇವೆ ನೆರವೇರಿಸಲು ಮುಂದಾಗಿದ್ದಾರೆ. ವಿನಯ ಕುಲಕರ್ಣಿ ಹಾಗೂ ಅವರ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಜಂಕ್ಷನ್ ನ ಕೊರಗಜ್ಜನ ಕಟ್ಟೆಯಲ್ಲಿ ಕೋಲ ಸೇವೆ ನಡೆಯಲಿದೆ.
ಮಳೆಯ ಕಾರಣ ಪೆಂಡಾಲ್ ಹಾಕಿ ಸಕಲ ಸಿದ್ಧತೆ ನಡೆಸಲಾಗಿದೆ. ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರ ಕೊಲೆಯ ನಂತರ ಸಿಬಿಐ ನ್ಯಾಯಾಲಯ ಅವರನ್ನು ಧಾರವಾಡ ಪ್ರವೇಶಿಸದಂತೆ ನಿರ್ಬಂಧಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಕ್ಷೇತ್ರಕ್ಕೆ ಭೇಟಿ ನೀಡದೆ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಶಾಸಕನಾದರೂ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧವಿದೆ. ಮುಂದಿನ ತಿಂಗಳು ಇದೇ ವಿಚಾರಕ್ಕೆ ಸಂಬಂಧಿಸಿ ವಿಚಾರಣೆ ಇದೆ ಎನ್ನಲಾಗಿದ್ದು ಈ ನಡುವೆ ಅವರು ತುಳುನಾಡಿದ ಕಾರ್ಣಿಕ ಶಕ್ತಿ ಕೊರಗಜ್ಜ ದೈವದ ಮೊರೆ ಹೋಗಿದ್ದಾರೆ.