ವಸಂತ ಬಂಗೇರ ಅವರು ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದು ಶಾಸಕರಾದ ಹೆಗ್ಗಳಿಕೆ ಹೊಂದಿದ್ದಾರೆ. 1983 ಮತ್ತು 1985ರಲ್ಲಿ ಬಿಜೆಪಿಯಿಂದ, 1994ರಲ್ಲಿ ಜನತಾದಳದಿಂದ, 2008 ಮತ್ತು 2013ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದರು.

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಬೆಳ್ತಂಗಡಿ ಮತಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದ ಕೆ.ವಸಂತ ಬಂಗೇರ(79) ಇಂದು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪ್ರಥಮ ಪುತ್ರರಾಗಿ 1946ರ ಜನವರಿ 15ರಂದು ಜನಿಸಿದ ಅವರು ಇತ್ತೀಚಿಗೆ ಅನಾರೋಗ್ಯ ಪೀಡಿತರಾಗಿದ್ದರು. ಇಂದು ಚಿಕಿತ್ಸೆ ಫಲಿಸದೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೇ 9ರಂದು ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿಗೆ ಕರೆ ತರುವ ನಿರೀಕ್ಷೆ ಇದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೆ. ವಸಂತ ಬಂಗೇರ ಅವರು ಬಿಜೆಪಿಯ ಮೊದಲ ಇಬ್ಬರು ಶಾಸಕರಲ್ಲಿ ಒಬ್ಬರು ಎನ್ನುವುದು ವಿಶೇಷ.

ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದು ಶಾಸಕರಾದ ಹೆಗ್ಗಳಿಕೆ ಅವರದು. 1983 ಮತ್ತು 1985ರಲ್ಲಿ ಬಿಜೆಪಿಯಿಂದ, 1994ರಲ್ಲಿ ಜನತಾದಳದಿಂದ, 2008 ಮತ್ತು 2013ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದರು.

ಇವರಿಗೆ ಪತ್ನಿ ಸುಜಿತಾ ವಿ ಬಂಗೇರ, ಪುತ್ರಿಯರಾದ ಪ್ರೀತಿತಾ ಹಾಗೂ ಬಿನುತಾ, ಅಳಿಯಂದಿರಾದ ಧರ್ಮ ವಿಜೇತ್ ಹಾಗೂ ಸಂಜೀವ್ ಕಣೇಕಲ್ ಹಾಗೂ ಮೊಮ್ಮಕ್ಕಳು ಇದ್ದಾರೆ.