ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಮೂಲತಃ ಜನತಾ ಪರಿವಾರದವರಾದ ಅವರು
ಈ ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ 3 ಸಲ ಶಾಸಕರಾಗಿ ಗೆಲುವು ಸಾಧಿಸಿದ್ದರು. ಮಾಜಿ ಸಂಸದ, ಮಾಜಿ ಸಚಿವ ಹಾಗೂ ಶ್ರೇಷ್ಠ ನ್ಯಾಯವಾದಿಯಾಗಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರನ್ನು ಕಾಂಗ್ರೆಸ್ ಪಕ್ಷ ಮತ್ತೆ ಸೆಳೆದು ಕೊಂಡು ಅಭ್ಯರ್ಥಿಯನ್ನಾಗಿ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಈ ಕ್ಷೇತ್ರದಲ್ಲಿ ಹೆಗ್ಡೆಯವರ ಬಂಟ ಸಮುದಾಯ ಬಲಿಷ್ಠವಾಗಿದೆ. ಹೀಗಾಗಿ ಅವರನ್ನು ನಿಲ್ಲಿಸಿದರೆ ಬಂಟ ಸಮುದಾಯದ ಮತಗಳನ್ನು ಸುಲಭವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಕರ್ಷಿಸಬಹುದು ಎಂಬ ಹವಣಿಕೆಯಲ್ಲಿರುವ ಆ ಪಕ್ಷ, ಕರಾವಳಿಯಲ್ಲಿ ಜನರಿಗೆ
ಚಿರಪರಿಚಿತರಾಗಿರುವ ಈ ನಾಯಕನಿಗೆ ಟಿಕೆಟ್ ನೀಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಜಯಪ್ರಕಾಶ ಹೆಗ್ಡೆ ಅವರ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸಿರುವ ಜಯ ಪ್ರಕಾಶ ಹೆಗ್ಡೆ ಒಂದು ವಾರದಲ್ಲಿ ತನ್ನ ರಾಜಕೀಯ ಮರು ಪ್ರವೇಶದ ನಿಲುವನ್ನು ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ.

ಹೆಗ್ಡೆ ಹೇಳಿದ್ದೇನು ?
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಒಂದು ವಾರದಲ್ಲಿ ನಿರ್ಧರಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಆಯೋಗದ ಆಯೋಗದ ಅಧ್ಯಕ್ಷನಾದ ಕೂಡಲೇ ತನ್ನ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸಹಜವಾಗಿಯೇ ರದ್ದಾಗಿದೆ. ಮರಳಿ ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪ್ರಸ್ತುತ ತಾನು ಯಾವುದೇ ಪಕ್ಷದ ಸದಸ್ಯನಲ್ಲ. ಯಾವುದೇ ಪಕ್ಷ ಸೇರುವ ಬಗ್ಗೆಯಾಗಲಿ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯಾಗಲಿ ನಿರ್ಧಾರ ಮಾಡಿಲ್ಲ. ಕುಟುಂಬ ಸದಸ್ಯರ ಮತ್ತು ಆಪ್ತರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ. ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ, ಕರೆ ಮಾಡುತ್ತಿದ್ದಾರೆ, ಆದರೆ ಯಾವುದೇ ಪಕ್ಷದಿಂದ ಅಧಿಕೃತ ಆಹ್ವಾನ ಬಂದಿಲ್ಲ.

ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸುವ ವದಂತಿಗಳಿಗೆ ಪ್ರತಿಕ್ರಿಯಿಸಿದ ಹೆಗ್ಡೆ, ಚುನಾವಣೆಗೆ ಸರ್ಧಿಸಬೇಕು ಬೇಡವೋ ಎನ್ನುವ ಗೊಂದಲದಲ್ಲಿದ್ದೇನೆ, ಈ ಬಗ್ಗೆ ಮೊದಲು ಚರ್ಚಿಸಿ ಮಾಡುತ್ತೇನೆ, ಆಮೇಲೆ ಯಾವ ಪಕ್ಷ ಎಂದು ಯೋಚಿಸುತ್ತೇನೆ. ಹಿಂದೆ ನಾನು ಉಡುಪಿ-ಚಿಕ್ಕಮಗಳೂರು ಆ ಸಂಸದನಾಗಿದ್ದೆ, ಆದರೆ ಈಗ ಪುನಃ ಸ್ಪರ್ಧಿಸುವುದು ಸುಲಭದ ಕೆಲಸವಲ್ಲ, ರಿಸ್ಕ್ ಇದೆ. ಮತದಾರರನ್ನು ಇ ಪುನಃ ಸಂಪರ್ಕಿಸಬೇಕು, ನನ್ನ ವಯಸ್ಸು ಮತ್ತು ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.