ಬೆಳಗಾವಿ ವಿಮಾನ ನಿಲ್ದಾಣದಲ್ಲಿನ ರಸ್ತೆ ಅಗಲೀಕರಣ, ಪಾರ್ಕಿಂಗ್ ಜೊತೆಗೆ ಅತೀ ಹೆಚ್ಚು ವಿಮಾನ ಸಂಚಾರಕ್ಕೆ ಅನುಕೂಲವಾಗಲು ವ್ಯವಸ್ಥೆ ಕಲ್ಪಿಸಲಾಗುವುದು. ಮುಂಬರುವ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು: ಮಂಗಲಾ ಅಂಗಡಿ, ಸಂಸದೆ, ಬೆಳಗಾವಿ

ಬೆಳಗಾವಿ : ಕೇಂದ್ರ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಲ್ಲ; ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿನ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ರೈಲ್ವೆ ನಿಲ್ದಾಣ, ರೈಲು ಮಾರ್ಗ ನಿರ್ಮಾಣ, ಹೊಸ ಶಿಕ್ಷಣ ನೀತಿ ಜಾರಿ, ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಸರ್ಕಾರ ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ
ಬೆಳಗಾವಿ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಭಾನುವಾರ (ಮಾ.10) ನಡೆದ ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ವರ್ಚುವಲ್ (ಆನ್ ಲೈನ್) ಮೂಲಕ ಶಂಕುಸ್ಥಾಪನಾ ನೆರವೇರಿಸಿ ಅವರು ಮಾತನಾಡಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಅನುಕೂಲಕರ ವಾತಾವರಣವನ್ನು ಒದಗಿಸುತ್ತಿದೆ. ಸಣ್ಣ ಸಣ್ಣ ನಗರಗಳನ್ನು ಗುರುತಿಸಿ ಮೆಟ್ರೋ ಹಾಗೂ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದೆ. ದೇಶಾದ್ಯಂತ ರೈಲ್ವೆ ನಿಲ್ದಾಣ ದುರಸ್ತಿ, ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ದೇಶದ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರಿಗೆ ಅನುಕೂಲಕ್ಕಾಗಿ ಬೆಳೆಗಳಿಗೆ ಬೇಡಿಕೆ ಹೆಚ್ಚಿಸಲಾಗಿದೆ. ತಂತ್ರಜ್ಞಾನ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯಿಂದ ಎಥನಾಲ್, ಬಯೋಗ್ಯಾಸ್ ತಯಾರಿಸಲಾಗುವುದು ಇದರಿಂದ ಕಬ್ಬು ಬೆಳೆಗೆ ಇನ್ನಷ್ಟು ಬೇಡಿಕೆ ಬರಲಿದೆ ಹಾಗೂ ದೇಶದ ಆರ್ಥಿಕತೆಯ ಪ್ರಗತಿಗೂ ಸಹಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಲ್ ಮೂಲಕ ತಿಳಿಸಿದರು.

ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ:
ಇದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಆಜಂಘಡದಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಸೇರಿದಂತೆ ದೇಶದಲ್ಲಿನ 15 ವಿಮಾನ ನಿಲ್ದಾಣಗಳ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಏಕಕಾಲದಲ್ಲಿ ವರ್ಚುವಲ್ (ಆನ್ ಲೈನ್) ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಇದಕ್ಕೂ ಮುಂಚೆ ಸ್ಥಳೀಯವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, “ಬೆಳಗಾವಿ ಒಂದು ಐತಿಹಾಸಿಕ ನೆಲ. ವಿಮಾನ ನಿಲ್ದಾಣ, ಭಾರತೀಯ ಸೇನಾ ಪಡೆ, ಸೇರಿದಂತೆ ದೇಶದ ಭದ್ರತೆಗೆ ಸಂಬಂಧಿಸಿದಂತೆ ಎಲ್ಲವೂ ಬೆಳಗಾವಿಯಲ್ಲಿದೆ. ಮೂರು ರಾಜ್ಯಗಳ ಗಡಿ ಹಂಚಿಕೊಂಡ ಬಹುದೊಡ್ಡ ಜಿಲ್ಲೆಯಾಗಿದೆ. ಇಸ್ರೋ ಚಂದ್ರಯಾನಕ್ಕೆ ಮೆಟೀರಿಯಲ್ ಕಳುಹಿಸಿದ ಬಳಷ್ಟು ಉದ್ಯಮಗಳು ಇಲ್ಲಿದ್ದು, ಇದು ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.

ಬೆಂಗಳೂರು ಮತ್ತು ಮಂಗಳೂರು ನಂತರ ರಾಜ್ಯದಲ್ಲಿ ಬೆಳಗಾವಿ ಮೂರನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಬಿಲ್ಡಿಂಗ್ ಪ್ರಾರಂಭಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ, ಲಿಫ್ಟ್, ಕಾರ್ ಪಾರ್ಕಿಂಗ್, ವಿಮಾನ ಲ್ಯಾಂಡಿಂಗ್ ರಸ್ತೆ ಅಗಲೀಕರಣ, ವಿಮಾನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುವುದು.
ಅಂದಾಜು 350 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಿಸಲು ಈಗಾಗಲೇ ಟೆಂಡರ್ ನೀಡಲಾಗಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಬೆಳಗಾವಿಯಲ್ಲಿ ಕೂಡ ವಿಶೇಷ ವಿನ್ಯಾಸ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಿತ್ತೂರು ವಿಜಯೋತ್ಸವ 200 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಮುಂಭಾಗದಲ್ಲಿ ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅದರಂತೆ ಅನುಮತಿ ಕೂಡ ದೊರೆತಿದೆ. ಒಂದು ಲಕ್ಷ ಅಧಿಕ ನೊಂದಾಯಿತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇ.ಎಸ್.ಐ.ಸಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ -2 ಪ್ರಕಾಶ ಹುಕ್ಕೇರಿ, ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.