ಪುತ್ತೂರು: ಕರ್ನಾಟಕದ ಗಡಿಗ್ರಾಮದ ನೆಟ್ಟಣಿಗೆ ಮುಡ್ನೂರಿನಲ್ಲಿ ಕೆಪಿಎಸ್ ಮಾದರಿ ಸ್ಕೂಲ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಎಲ್ಕೆಜಿಯಿಂದ ಪಿಯುಸಿ ತನಕ ಒಂದೇ ಕಡೆ ವಿದ್ಯಾಬ್ಯಾಸ ಮಾಡುವ ಅವಕಾಶ ಒದಗಿಬರಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢ ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸುಮಾರು ೩೦ ಲಕ್ಷ ರೂ ಅನುದಾನ ಸಿಎಸ್ಆರ್ ಫಂಡ್ನಿಂದ ಬಿಡುಗಡೆಯಾಗಿದೆ. ಹೊಸ ತರಗತಿ ಕಟ್ಟಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ಭಾಹಗದ ವಿದ್ಯಾರ್ಥಿಗಳು ಪಿಯುಸಿ ವ್ಯಾಸಂಗಕ್ಕಾಗಿ ೨೦ ಕಿ ಮೀ ದೂರದಲ್ಲಿರುವ ಕಾಲೇಜಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿ ಈ ಭಾಗಕ್ಕೆ ಕೆಪಿಎಸ್ ಸ್ಕೂಲ್ ಅಗತ್ಯವಾಗಿದೆ. ಎಲ್ಕೆಜಿಯಿಂದ ಪಿಯುಸಿ ತನಕ ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯಲಿದೆ ಎಂದು ಹೇಳಿದರು. ನೆಟ್ಟಣಿಗೆ ಮುಡ್ನೂರು ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಗಡಿಗ್ರಾಮವನ್ನು ಇನ್ನಷ್ಟು ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.
ನಮ್ಮ ಬೇಡಿಕೆಗೆ ಈ ಬಾರಿ ಮನ್ನನೆ ಸಿಕ್ಕಿದೆ: ಶ್ರೀರಾಂ ಪಕ್ಕಳ
ಗಡಿಗ್ರಾಮವಾದ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಸೌಕರ್ಯ ಮತ್ತು ಸೌಲಭ್ಯಗಳ ಕೊರತೆ ಇತ್ತು. ಅನೇಕ ವರ್ಷಗಳಿಂದ ನಾವು ಮನವಿ ಮಾಡುತ್ತಿದ್ದರೂ ಬೇಡಿಕೆ ಈಡೇರಿರಲಿಲ್ಲ, ಈ ಬಾರಿ ಶಾಸಕ ಅಶೋಕ್ ರೈ ಅವರ ಮೂಲಕ ಬೇಡಿಕೆ ಈಡೇರಿದೆ ಎಂದು ಶಾಲಾ ಕಾರ್ಯಾಧ್ಯಕ್ಷರಾದ ಶ್ರೀರಾಂ ಪಕ್ಕಳ ಹೇಳಿದರು. ಇಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಕೆಪಿಎಸ್ ಸ್ಕೂಲ್ಗೆ ಶಾಸಕರು ಶಿಫಾರಸ್ಸು ಮಾಡಿರುವುದಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರು. ಬಡವರ ಮಕ್ಕಳೂ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಈ ಭಾಗದಲ್ಲಿ ಕೆಪಿಎಸ್ ಸ್ಕೂಲ್ ಆರಂಭವಾಗಬೇಕು ಎಂಬುದು ಗ್ರಾಮಸ್ಥರ ಬಹಳ ವರ್ಷದ ಕನಸಾಗಿತ್ತು ಅದು ನನಸಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ರಮೇಶ್ ರೈ ಸಾಂತ್ಯ, ಕುಸುಮಾ ಕರ್ನೂರು ಗುತ್ತು, ಲಲಿತಾ ಮೇನಾಲ, ಇಂದಿರಾ, ಇಬ್ರಾಹಿಂ, ಪ್ರಫುಲ್ಲ ರೈ, ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಮೂಸಾನ್, ಸದಾಶಿವ ರೈ ನಡುಬೈಲು, ಖಾದರ್ ಕರ್ನೂರು,ಎಸ್ಡಿಎಂಸಿ ಅಧ್ಯಕ್ಷ ಸೂಫಿ ಬಾಂತಡ್ಕ, ವಿಕ್ರಂ ರೈ ಸಾಂತ್ಯ,ಅಬ್ದುಲ್ ಖಾದರ್ ಸುರುಳಿಮೂಲೆ,ಮಹಮ್ಮದ್ ಪಳ್ಳತ್ತೂರು, ಕೆ ಎಂ ಮಹಮ್ಮದ್ ಮೇನಾಲ, ಶಾಲಾ ಮುಖ್ಯ ಶಿಕ್ಷಕ ಪ್ರೆಮ್ ಕುಮಾರ್ , ಗ್ರಾಪಂ ಅಧ್ಯಕ್ಷೆ ಫೌಝಿಯಾ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಉಪಾಧ್ಯಕ್ಷ ರಾಮ ಕೆ ಮೇನಾಲ ಸ್ವಾಗತಿಸಿದರು. ಮಹಾಬಲ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು.