ಬೆಳಗಾವಿ : ಕುಂಭಮೇಳಕ್ಕೆ ಕರ್ನಾಟಕದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದಾರೆ. ಕೆಲವರು ಮುಂದಿನ ತಿಂಗಳಿನಿಂದ ಕುಂಭಮೇಳಕ್ಕೆ ಹೋಗಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಇಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕೆಲ ಬೆಳಗಾವಿಯ ಪ್ರಜೆಗಳು ಸಿಲುಕಿರುವುದು ಗೊತ್ತಾಗಿದೆ.

ಬೆಳಗಾವಿಯಿಂದ ಪ್ರಯಾಗ್ ರಾಜ್‌ನ ಕುಂಭಮೇಳಕ್ಕೆ 500 ಕ್ಕೂ ಅಧಿಕ ಜನ ತೆರಳಿದ್ದು, ಇಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರಿಗೆ ಗಾಯವಾಗಿದೆ.

ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯವಾಗಿದೆ.‌ ಬೆಳಗಾವಿ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪಾರ್ಡೆ‌ಗೆ ಗಾಯವಾಗಿದೆ. ಬಾಲಕಿಯರಾದ ಮೇಘಾ, ಜ್ಯೋತಿ ಕೂಡ ಕಾಲ್ತುಳಿತದಲ್ಲಿ ಗಾಯವಾಗಿದೆ.

ಮೂರು ದಿನಗಳ ಹಿಂದೆ ಬೆಳಗಾವಿಯಿಂದ ಪ್ರಯಾಗ್‌ಗೆ ನಾಲ್ವರು ತೆರಳಿದ್ದರು. ಇಂದು ಬೆಳಗ್ಗೆ ಸಂಭವಿಸಿದ ಕಲ್ತುಳಿತದಲ್ಲಿ ಬೆಳಗಾವಿಯ ನಾಲ್ವರಿಗೆ ಗಾಯವಾಗಿದೆ.‌ ಗಾಯಾಳುಗಳನ್ನು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಇನ್ನೊಂದು ಪ್ರತ್ಯೇಕವಾದ ಪ್ರಕರಣದಲ್ಲಿ ಬೆಳಗಾವಿಯ 9 ಜನ ಸೇರಿದಂತೆ ಕರ್ನಾಟಕದಿಂದ ಎರಡು ಬಸ್ ಗಳಲ್ಲಿ 60 ಜನ ಕುಂಭಮೇಳಕ್ಕೆ ತೆರಳಿದ್ದರು. ಮಂಗಳವಾರ ಬೆಳಗಾವಿಯ ತಂಡದಲ್ಲಿನ 5 ಜನ ಬೇರೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಹುಡುಕಾಟ ನಡೆದಿದೆ.