ಶಿರಸಿ:
ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಮತ್ತು ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಶಿರಸಿ ತಾಲೂಕಿನ ಬಂಡಲ ಎಂಬಲ್ಲಿ ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು. ಮತ್ತೊಬ್ಬರು ತಮಿಳುನಾಡಿನವರು ಎಂದು ಗುರುತಿಸಲಾಗಿದೆ. ಬಸ್ಸಿನ ಚಾಲಕನ ಭಾಗವೂ ನಜ್ಜುಗುಜ್ಜಾಗಿದೆ, ಆದರೆ, ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಬಸ್ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ಬಸ್ಸಿಗೆ ಡಿಕ್ಕಿ ಹೊಡೆದ ಕಾರು ಬಸ್ಸಿನ ಮಧ್ಯ ಭಾಗಕ್ಕೆ ಹೋಗಿ ನಿಂತಿದೆ. ಬಸ್ ನಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರಿದ್ದು, ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದ ಮದುವೆಗೆ ಆಗಮಿಸುತ್ತಿದ್ದ ಮಂಗಳೂರಿನ ಕಂದಾವರ ಮೂಲದ ರಾಮಕೃಷ್ಣ ಬಾಬುರಾವ್ (71), ವಿದ್ಯಾಲಕ್ಷ್ಮೀ ರಾಮಕೃಷ್ಣ(65), ಪುಷ್ಪಾ ಮೋಹನ ರಾವ್ (62), ಸುಹಾಸ್ ಗಣೇಶ ರಾವ್ (30), ಹಾಗೂ ಚೆನ್ನೈನ ಅರವಿಂದ(30) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೆ. ಮತ್ತೊಬ್ಬರು ಅವರ ಸ್ನೇಹಿತರು ಎನ್ನಲಾಗಿದೆ.