ಬೆಳಗಾವಿ : ನಾಡಿನ ಹಿರಿಯ ಸಾಹಿತಿ, ಕೆಎಲ್‌ಇ ಇತಿಹಾಸಕಾರ, ಕೆಎಲ್‌ಇ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರಾ.ಬಿ.ಎಸ್.ಗವಿಮಠ ಅವರು ಗಡಿನಾಡ ಚೇತನ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಅವರಿಗೆ ಸರ್ಕಾರ ನೀಡುವ ‘ಗಡಿನಾಡ ಚೇತನ ಪ್ರಶಸ್ತಿ’ಗೆ ಭಾಜನರಾಗಿರುವುದು ಸಮಸ್ತ ಕೆಎಲ್‌ಇ ಸಂಸ್ಥೆಗೆ ಅಭಿಮಾನವನ್ನುಂಟುಮಾಡಿದೆ. ಗಡಿಭಾಗದಲ್ಲಿ ಕೆಎಲ್‌ಇ ಸಂಸ್ಥೆ ಮಾಡಿರುವ ಕನ್ನಡ ಸೇವೆಗೆ ದೊರೆತ ಗೌರವವೆನಿಸಿದೆ. ಕನ್ನಡಿಗರಲ್ಲಿ ನಾಡುನುಡಿಗಳ ಬಗ್ಗೆ ಪ್ರಜ್ಞೆ ಹುಟ್ಟುಹಾಕಿದ ಕವಿ ಡಾ. ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಡಾ.ಬಿ.ಎ.ಸನದಿ, ಬ.ಗಂ.ತುರಮರಿ ಮುಂತಾದ ದಿಗ್ಗಜರ ಪರಂಪರೆಯಲ್ಲಿ ಬೆಳೆದು ಬಂದವರು ಬಿ.ಎಸ್.ಗವಿಮಠರು. ಅವರ ವಾರಸುದಾರರಂತೆ, ಬೆಳಗಾವಿಯಲ್ಲಿ ನೆಲೆನಿಂತು ಕಳೆದ 50 ವರ್ಷಗಳಿಗೂ ಅಧಿಕ ಕಾಲ ಸಾಹಿತ್ಯ ಸೃಷ್ಟಿ ಮಾಡಿ 50 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ರಂಗಭೂಮಿಯ ಅಭಿವೃದ್ಧಿಗೆ ನಾಟಕ ಅಕೆಡಮಿ ಸದಸ್ಯರಾಗಿ ಮತ್ತು ರಂಗಭೂಮಿ ಸಹಕಾರಿ ಸಂಘದ ನಿರ್ದೇಶಕರಾಗಿ ಶ್ರಮಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರಸಾರಾಂಗದ ನಿರ್ದೇಶಕರಾಗಿ, ವಾರ್ತಾಪತ್ರಿಕೆಯ ಸಂಪಾದಕರಾಗಿ ಸೇವೆ ನೀಡಿದ್ದಾರೆ. ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಬೆಳಕಿಗೆ ತಂದಂತೆ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ನೂರು ವರ್ಷಗಳ ಇತಿಹಾಸವನ್ನು ರಚಿಸಿ ಬೆಳಕಿಗೆ ತಂದಿದ್ದಾರೆ. ಏಕಕಾಲಕ್ಕೆ ನೂರು ಪುಸ್ತಕಗಳ ಪ್ರಕಟಣೆಯ ಕೀರ್ತಿಗೆ ಭಾಜನರಾದ ಗವಿಮಠರ ಯೋಗದಾನ ಮೌಲಿಕವೆನಿಸಿದೆ. ಬೆಳಗಾವಿಯಲ್ಲಿ 1980 ರಲ್ಲಿ ಅಖಿಲ ಭಾರತ 52 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಂಟಿ ಕಾರ್ಯದರ್ಶಿಯಾಗಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಹಳೆಯ ಕನ್ನಡ ಸಾಹಿತ್ಯ ಭವನ ಮತ್ತು ನೂತನ ಕನ್ನಡ ಭವನಗಳ ನಿರ‍್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಗವಿಮಠರು ಬೆಳಗಾವಿಯ ಹತ್ತು ಹಲವಾರು ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಆದರ್ಶಪ್ರಾಯರಾಗಿದ್ದಾರೆ.
ನೇರ ನಡೆನುಡಿಯ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಆಡಳಿತಗಾರರಾಗಿ, ಶಿಕ್ಷಣ ತಜ್ಞರಾಗಿ, ಲೇಖಕರಾಗಿ, ಕವಿಗಳಾಗಿ ಗುರುತಿಸಿಕೊಂಡಿರುವ 77 ರ ಪ್ರಾಯದ ಗವಿಮಠರು ಇಂದಿಗೂ ಕ್ರಿಯಾಶೀಲರಾಗಿ, ಸಾರಸ್ವತಲೋಕದಲ್ಲಿ ಹಿರಿಯ ಸಾಹಿತಿಯಾಗಿ, ಕನ್ನಡ ನಾಡು ನುಡಿಗಳ ಸೇವೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ “ಗಡಿನಾಡ ಚೇತನ” ಬಂದಿರುವದು ಅರ್ಹತೆಗೆ ಸಂದ ಪುರಸ್ಕಾರವಾಗಿದೆ. ಸರಿಯಾದ ವ್ಯಕ್ತಿಗೆ ಪ್ರಶಸ್ತಿ ಬಂದಿರುವುದಕ್ಕೆ ಸಾರಸ್ವತ ಲೋಕ ಹೆಮ್ಮೆ ಪಡುತ್ತಿದೆ.
ಪ್ರಾ.ಬಿ.ಎಸ್.ಗವಿಮಠರು ಇದೇ ತಿಂಗಳು ಸೆಪ್ಟೆಂಬರ್ 30 ರಂದು ಕರ್ನಾಟಕ ಸರ್ಕಾರದ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿಚೇತನ ಪ್ರಶಸ್ತಿ’ ಪ್ರದಾನ ಸಮಾರಂಭವು ಮಹಾರಾಷ್ಟ್ರದ ಜತ್ತ ತಾಲೂಕಿನ ಮಹಾಕ್ಷೇತ್ರ ದಾನಮ್ಮದೇವಿಯ ಪುಣ್ಯನೆಲೆ ಗುಡ್ಡಾಪುರದಲ್ಲಿ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಗಡಿ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಸಿ.ಸೋಮಶೇಖರ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ವಿಶ್ರಾಂತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ, ಡಾ.ಬಸವರಾಜ ಜಗಜಂಪಿ, ಡಾ.ರಾಮಕೃಷ್ಣ ಮರಾಠೆ, ಡಾ.ಡಿ.ಎಸ್.ಚೌಗಲೆ, ಡಾ.ವಿ.ಎಸ್.ಮಾಳಿ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ವೈ.ಬಿ.ಹಿಮ್ಮಡಿ, ಡಾ.ಮಹೇಶ ಗುರನಗೌಡರ, ಡಾ.ಪಿ.ಜಿ.ಕೆಂಪಣ್ಣವರ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಎಲ್.ಎಸ್.ಶಾಸ್ತ್ರಿ, ಡಾ.ಎಸ್.ಎಸ್.ಅಂಗಡಿ, ಏಣಗಿ ಸುಭಾಷ, ಪ್ರೊ.ಎಂ.ಎಸ್.ಇಂಚಲ, ಪ್ರೊ.ಎಲ್.ವ್ಹಿ.ಪಾಟೀಲ, ಪ್ರಕಾಶ ಗಿರಿಮಲ್ಲನವರ, ನೀಲಗಂಗಾ ಚರಂತಿಮಠ ಮೊದಲಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.