ಮಂಗಳೂರು: ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಕೂಗು ಕೇಳಿ ಬಂದಿದ್ದು, ಈಗಾಗಲೇ ಮಂಗಳೂರು ಹೈಕೋರ್ಟ್ ಪೀಠ ಹೋರಾಟ ಸಮಿತಿ ಆರಂಭವಾಗಿದೆ. ಶನಿವಾರ ಈ ಹೋರಾಟ ಸಮಿತಿಯಿಂದ ಮಂಗಳೂರು ವಕೀಲರ ಸಂಘದ ಟಿವಿ ಹಾಲ್‌ನಲ್ಲಿ ಸಭೆ ನಡೆದಿದೆ. ಮಂಗಳೂರು ವಕೀಲರ ಸಂಘದ ವತಿಯಿಂದ ಎಂಎಲ್‌ಸಿ ಐವನ್ ಡಿಸೋಜ ಅವರ ಸಂಚಾಲಕತ್ವದಲ್ಲಿ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಈಗಾಗಲೇ ಪ್ರಾರಂಭವಾಗಿದೆ‌. ಈ ಹೋರಾಟ ನಿರಂತರವಾಗಿ ನಡೆಯಬೇಕು, ಸರ್ಕಾರಕ್ಕೆ ಕೂಗು ಕೇಳಬೇಕೆಂಬ ಉದ್ದೇಶದಿಂದ ಈ ಸಮಿತಿಯನ್ನು ವಿಸ್ತರಿಸಿ ನಮ್ಮ ಹೋರಾಟಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಬೇಕೆಂಬು ಉದ್ದೇಶದಿಂದ ಇಂದು ಸಭೆ ನಡೆಯಿತು. ಈಗಾಗಲೇ ಹಲವಾರು ಹಿರಿಯ ವಕೀಲರ ನೇತೃತ್ವದಲ್ಲಿ ಸಭೆಗಳನ್ನು ಮಾಡಲಾಗಿದೆ. ಜಿಲ್ಲೆಯ ಹಲವಾರು ತಾಲೂಕು ವಕೀಲರ ಸಂಘಗಳಿಗೆ ಭೇಟಿ ನೀಡಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕೆಂಬ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಮತ್ತು ಮೂಡುಬಿದಿರೆ ವಕೀಲರ ಸಂಘದ ಪದಾಧಿಕಾರಿಗಳು ಈ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಹೈಕೋರ್ಟ್ ಪೀಠದ ಬೇಡಿಕೆಯಿಟ್ಟು ಸಾಮಾನ್ಯ ಜನರನ್ನು ತಲುಪಲು ಆದಷ್ಟು ಪ್ರಯತ್ನ ಮಾಡಲಾಗುತ್ತಿದೆ.