ಬೆಳಗಾವಿ : ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡದವರೆಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ವಂದೇ ಭಾರತ ರೈಲು ಕೊನೆಗೂ ಬೆಳಗಾವಿಗೆ ಬರಲೇ ಇಲ್ಲ. ಹುಬ್ಬಳ್ಳಿ- ಧಾರವಾಡದವರೆಗೆ ಬರುವ ರೈಲನ್ನು ಕೆಲ ಕಾಲದವರೆಗೆ ಮಾತ್ರ ಬೆಳಗಾವಿವರೆಗೆ ವಿಸ್ತರಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಬೆಳಗಾವಿಗೆ ಈ ರೈಲು ಬರುವುದನ್ನು ತಡೆಹಿಡಿಯಲಾಗಿತ್ತು.
ಮಾಜಿ ಮುಖ್ಯಮಂತ್ರಿಗಳು ಅಗಿರುವ ಬೆಳಗಾವಿ ಸಂಸದರಾಗಿರುವ ಜಗದೀಶ ಶೆಟ್ಟರ್ ಅವರು ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ.
ಹುಬ್ಬಳ್ಳಿ-ಧಾರವಾಡದ ಪ್ರಬಲ ಲಾಭಿಯ ಹಿಂದೆ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳು ಬೆಳಗಾವಿ ಜನತೆಯ ಒತ್ತಾಯಕ್ಕೆ ಮಣಿಯಲೇ ಇಲ್ಲ. ರಾಜಧಾನಿ ಬೆಂಗಳೂರಿನಿಂದ ಧಾರವಾಡದವರೆಗೂ ಬರುವ ಈ ರೈಲನ್ನು ಬೆಳಗಾವಿಗೆ ವಿಸ್ತರಿಸಬೇಕು ಎನ್ನುವುದು ಬೆಳಗಾವಿ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಹತ್ತಾರು ಸಲ ಕೇಂದ್ರ ರೈಲ್ವೆ ಸಚಿವರು ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಇಲ್ಲಿಯ ಜನತೆ ಹಕ್ಕೊತ್ತಾಯ ಮಾಡಿದ್ದರು. ಆದರೂ ಯಾವ ಪ್ರಯೋಜನವು ಆಗಿಲ್ಲ. ಜಗದೀಶ ಶೆಟ್ಟರ್ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಅಧಿಕಾರಿಗಳು ಅವರ ಮಾತಿಗೆ ಯಾವ ಬೆಲೆ ಕೊಡುತ್ತಿಲ್ಲ ಎನ್ನುವುದು ಗೊತ್ತಾಗಿದೆ.
ಪುಣೆಯಿಂದ ಹುಬ್ಬಳ್ಳಿವರೆಗೆ ವಂದೇ ಭಾರತ ರೈಲು ಓಡಾಡುತ್ತಿದೆ. ಆದರೆ ಅದೇ ಮಾರ್ಗದಲ್ಲಿ ಹುಬ್ಬಳ್ಳಿಯಿಂದ ಬೆಳಗಾವಿವರೆಗೆ ಒಂದೇ ಭಾರತ ರೈಲು ಓಡಾಡಲು ಯಾವ ತೊಂದರೆ ಎನ್ನುವುದು ನಾಗರಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. 2025 ರ ಹೊಸ ವರ್ಷದಲ್ಲಾದರೂ ನೈರುತ್ಯ ರೈಲ್ವೆ ವಲಯ ಬೆಳಗಾವಿ ಜನತೆಯ ಒತ್ತಾಯಕ್ಕೆ ಮಣಿದು ವಂದೇ ಭಾರತ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಲು ಮುಂದಾಗಬೇಕು ಎನ್ನುವುದು ಇಲ್ಲಿ ಜನತೆಯ ಒತ್ತಾಯವಾಗಿದೆ.