ಜಗತ್ತು ಬಹಳ ವೇಗವಾಗಿ ಮುಂದೆ ಸಾಗುತ್ತಿದೆ. ನಾವೇ ಆ ವೇಗಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಾವು ಬಹಳ ಹಿಂದುಳಿದುಬಿಡುತ್ತೇವೆ. ಈಗೆಲ್ಲ ನಾವು ನಮ್ಮ ಹಳೆಯ ಕತೆ ಹೇಳಿಕೊಳ್ಳುತ್ತ ಕುಳಿತರೆ ಏನೂ ಪ್ರಯೋಜನವಿಲ್ಲ. ನನ್ನಪ್ಪ ಹಾಗಿದ್ದ, ನಮ್ಮಜ್ಜ ಹಾಗಿದ್ದ, ಮುತ್ತಜ್ಜ ಹಾಗಿದ್ದ ಎಂದು ಗತವೈಭವ ಹೇಳುತ್ತಹೋದರೆ ಯಾರಿಗೂ ಕೇಳುವ ಸಹನೆಯೂ ಇಲ್ಲ, ಕೇಳಲು ಸಮಯವೂ ಇಲ್ಲ. ಮೊದಲು ನೀನು ಏನು, ನಿನ್ನ ಸಾಧನೆ ಏನು ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೇ ಕವಿ ಹೇಳಿದ್ದು-
” ನಿನ್ನೆ ನಿನ್ನೆಗೆ , ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ”
ಎಂದು.ಇಂದಿನದಷ್ಟೇ ಇಂದು ಮುಖ್ಯ. ನಿನ್ನೆಯದು ತನ್ನ ಪ್ರಸ್ತುತತೆ ಕಳೆದುಕೊಂಡುಬಿಡುತ್ತದೆ. ನಮ್ಮ ವಯಸ್ಸಿನವರ ಒಂದು ತಲೆಮಾರು ಹೆಚ್ಚುಕಡಿಮೆ ಮುಗಿಯುತ್ತಲಿದೆ. ಹೊಸ ತಲೆಮಾರಿನವರು ಬಂದಿದ್ದಾರೆ.ಅವರಿಗೆ ಹಿಂದಿನದೇನೂ ಗೊತ್ತಿಲ್ಲ, ಬೇಕಾಗಿಯೂ ಇಲ್ಲ. ನಮ್ಮ ಹಳಸಲು ಕತೆ ಕೇಳಲು ಯಾರಿಗೂ ಪುರುಸೊತ್ತಿಲ್ಲ. ನಾವೂ ಆ ಹೊಸಬರಿಗೆ/ ಹೊಸತನಕ್ಕೆ ಸ್ಪಂದಿಸಲು, ಏನಾದರೂ ಹೊಸತನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು , ಹೊಸತೇನನ್ನಾದರೂ ಕೊಡಲು ಪ್ರಯತ್ನಿಸಬೇಕು.
ಬೇರೆಯವರದು ಬೇಡ. ನನ್ನದೇ ಉದಾಹರಣೆ ಕೊಡುತ್ತೇನೆ. ನಾನು ಬೆಳಗಾವಿಯ ಪತ್ರಿಕಾರಂಗದಲ್ಲಿ ಒಂದೆರಡು ದಶಕಗಳ ಕಾಲ ಸಾಕಷ್ಟು ಕೆಲಸ ಮಾಡಿದ್ದೇನೆ. ಜಿಲ್ಲಾ ಪತ್ರಕರ್ತರ ಸಂಘಟನೆ ಮಾಡಿದ್ದೇನೆ. ರಾಜ್ಯ ಮಟ್ಟದ ಸಮ್ಮೇಳನ, ತರಬೇತಿ ಶಿಬಿರ ಎಲ್ಲ ಮಾಡಿದ್ದೇನೆ. ಆದರೆ ಇಂದು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪೀಳಿಗೆ ಬಂದಿದೆ. ಅವರಲ್ಲಿ ಹೆಚ್ಚಿನವರಿಗೆ ನಾನು ಮಾಡಿದ ಕೆಲಸ ಏನು ಎಂದು ಗೊತ್ತಿಲ್ಲ. ಅದು ಸಹಜವೂ ಹೌದು. ನನ್ನ ಬಗ್ಗೆ ನಾನೇ ಡಂಗುರ ಹೊಡೆದುಕೊಳ್ಳುತ್ತ ಹೋಗಲು ಸಾಧ್ಯವೇ?
ಇಂದಿನ ಪೀಳಿಗೆಯವರಿಗೆ ಬೇಕಾದದ್ದೇ ಬೇರೆ, ನಮ್ಮ ಕಾಲದ ಅಭಿರುಚಿ, ಜೀವನ ಶೈಲಿಗಳೇ ಬೇರೆ. ಇದು ಎಲ್ಲ ಕ್ಷೇತ್ರದವರಿಗೂ ಅನ್ವಯಿಸುತ್ತದೆ. ನಾವೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಹೊರತು ಅವರನ್ನು ದೂಷಿಸಿ ಪ್ರಯೋಜನವಿಲ್ಲ. ನಮಗಿಂತ ನಮ್ಮ ಮಕ್ಕಳು ಬೇರೆಯೆನಿಸಿದರು. ಅವರಿಗಿಂತ ಮೊಮ್ಮಕ್ಕಳು ಬೇರೆಯೆನಿಸುತ್ತಿದ್ದಾರೆ. ಈ ಬದಲಾವಣೆಗಳನ್ನೆಲ್ಲ ನಾವು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು. ಬೇರೆ ದಾರಿಯಿಲ್ಲ. ಇದನ್ನೇ ಜನರೇಶನ್ ಗ್ಯಾಪ್ ಎನ್ನುವುದು.
– ಎಲ್. ಎಸ್. ಶಾಸ್ತ್ರಿ