ಉಡುಪಿ:
ಕರಾವಳಿ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆಯ ಬಳಿ ಬಿರುಕು ಕಂಡಿದ್ದು ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್‌ ಆಗುವ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ಹಾಗೂ ಘಾಟಿ ಆರಂಭದ ಮಧ್ಯೆ ಘನ ವಾಹನಗಳು ರಸ್ತೆಯ ಬದಿಯಲ್ಲಿ ಸಂಚರಿಸಿದರೆ ಸಂಪೂರ್ಣ ಕುಸಿಯುವ ಸ್ಥಿತಿ ಇದೆ.

ಪ್ರಸ್ತುತ ಈ ಕಿರಿದಾದ ಘಾಟಿಯಲ್ಲಿ ಹಲವಾರು ಘನವಾಹನಗಳು ಸಂಚರಿಸುತ್ತಿವೆ. ಈ ಹಿಂದೆ ಕೆಲವೆಡೆ ಘನ ವಾಹನಗಳು ಢಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆಗಳಿಗೆ ಹಾನಿಯಾಗಿತ್ತು. ಇದೀಗ ಘಾಟಿ ಆರಂಭದಲ್ಲಿ ರಸ್ತೆ ತೀರಾ ಕಿರಿದಾಗಿದ್ದು, ಒಂದು ವಾಹನ ಸಂಚರಿಸುವುದೂ ಕಷ್ಟ ಎಂಬಂತಿದೆ. ಇಂಥ ಸಂದರ್ಭದಲ್ಲಿ ಘನವಾಹನಗಳ ಸಂಚಾರದಿಂದ ಸಮಸ್ಯೆ ಬಿಗಡಾಯಿಸಬಹುದು ಎಂಬುದು ಸಾರ್ವಜನಿಕರ ಆತಂಕ.

ಇದೇ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಇರುವ ಕಾರಣ ಪ್ರವಾಸಿಗರ ವಾಹನಗಳ ದಟ್ಟಣೆ ಘಾಟಿಯಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಘನ ವಾಹನಗಳ ಓಡಾಟದಿಂದ ರಸ್ತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಬಿರುಕುಬಿಟ್ಟ  ತಡೆಗೋಡೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಮಳೆಗಾಲದಲ್ಲಿ ಮಳೆ ನೀರು ನುಗ್ಗಿ ತಡೆಗೋಡೆಗೆ ಭಾರೀ ಹಾನಿಯುಂಟಾಗಬಹುದು ಎಂಬ ಆತಂಕ ಎದುರಾಗಿದೆ. ಪ್ರತೀ ವರ್ಷ ಘಾಟಿಯ ಕೆಲವು ತಿರುವು ಗಳಲ್ಲಿ ಕುಸಿತ ಕಂಡುಬರುತ್ತಿದ್ದು ಕೆಲವು ಬಾರಿ ಮಳೆಗಾಲದಲ್ಲಿ ಘಾಟಿ ಸಂಚಾರ ಬಂದ್‌ ಆಗಿತ್ತು. ಮಳೆಗಾಲದ ಮೊದಲೇ ಕುಸಿತಗೊಂಡ ತಡೆಗೋಡೆ ಗಳನ್ನು ದುರಸ್ತಿ ಮಾಡದಿರುವುದೂ ಇದಕ್ಕೆ ಕಾರಣ ವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.