ಬೆಳ್ತಂಗಡಿ: ಧರ್ಮಸ್ಥಳ ‘ಹಸನ್ಮುಖಿ” ಅಗ್ರಹಾರ ನಿವಾಸಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಕಳೆದ 51 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಿಂದಲೇ ಯಕ್ಷಗಾನದಲ್ಲಿ ವೇಷಗಾರಿಕೆ ಹಾಗೂ ಹಿಮ್ಮೇಳವನ್ನು ಕಲಿತಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಸಾಧನೆ ಇವರದ್ದು. ಇವರ ತಂದೆ ಆ ಕಾಲದ ಉತ್ತಮ ಯಕ್ಷಗಾನ ಭಾಗವತರು. ಇದರಿಂದಾಗಿ ಅವರು ಯಕ್ಷಗಾನದತ್ತ ಆಕರ್ಷಿತರಾಗಿ ಈ ಕ್ಷೇತ್ರ ಪ್ರವೇಶ ಮಾಡಿದ್ದಾರೆ.
ತಂದೆಯವರ ಪ್ರೇರಣೆಯಿಂದ ಪ್ರಾಥಮಿಕ ಶಾಲಾ ಹಂತದಲ್ಲೇ ವೇಷಗಾರಿಕೆ ಮತ್ತು ಹಿಮ್ಮೇಳ ಕಲಿತರು. ಕಲಾವಿದರು, ದಿಗ್ಗಜರಿಂದ ನಾಟ್ಯ, ಚಂಡೆ ಮತ್ತು ತರಬೇತಿ ಪಡೆದು ನಿರಂತರ ಅಭ್ಯಾಸ ಮಾಡಿ ಸಾಧನೆಗೈದರು. ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಅವರು ಶ್ರೇಷ್ಠ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಖ್ಯಾತನಾಮರ ಜೊತೆ ಹಿಮ್ಮೇಳದಲ್ಲಿ ಮದ್ದಳೆ ಮತ್ತು ಚಂಡೆ ವಾದನದಲ್ಲೂ ಸೈ ಎನಿಸಿಕೊಂಡಿದ್ದಾರೆ.
ತಂದೆ ಬಿ. ರಾಘವೇಂದ್ರ ತೋಳ್ಪಾಡಿತ್ತಾಯರು ಉತ್ತಮ ಭಾಗವತರಾಗಿದ್ದು, ಅವರ ಪ್ರೇರಣೆಯಿಂದ ಪ್ರಾಥಮಿಕ ಶಾಲಾ ಹಂತದಿಂದಲೇ ವೇಷಗಾರಿಕೆ ಹಾಗೂ ಹಿಮ್ಮೇಳವನ್ನು ಕಲಿತರು. 1972ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಯಿತು. ಈ ಸಂದರ್ಭದಲ್ಲಿ ಕುರಿಯ ವಿಠಲಶಾಸ್ತ್ರೀ, ಮಾಂಬಾಡಿ ನಾರಾಯಣ ಭಾಗವತರಂತಹ ಮಹಾನ್ ಗುರುಗಳಿಂದ ಯಕ್ಷಗಾನ ನಾಟ್ಯ, ಹಾಗೂ ಚಂಡೆ, ಮದ್ದಳೆ ವಾದನದಲ್ಲಿ ಅಭ್ಯಾಸ ನಡೆಸಿದರು.
ಕಳೆದ 51 ವರ್ಷಗಳಿಂದ ನಿರಂತರ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಶ್ರೇಷ್ಠ ಮಟ್ಟದ ಮದ್ದಳೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ.
ಅಗ್ರಮಾನ್ಯ ಯಕ್ಷಗಾನ ಕಲಾವಿದರಾದ ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರ್‌ನಾರಾಯಣ ಭಟ್, ಗೋಪಾಲಕೃಷ್ಣ ಕುರೂಪ್ ಮೊದಲಾದ ಹಿರಿಯರ ಜತೆಗಾರಿಕೆಯಲ್ಲಿ ಭಾಗವತರಾದ ಕಡತೋಕ ಮಂಜುನಾಥ ಭಾಗವತ, ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಮೊದಲಾದ ಕಲಾವಿದರ ಜತೆ ತಿರುಗಾಟ ನಡೆಸಿದ್ದಾರೆ. ಚೆನ್ನೈ, ಹೈದರಾಬಾದ್, ಭೋಪಾಲ್, ದೆಹಲಿ, ಮುಂಬೈ ಮುಂತಾದ ಪ್ರಮುಖ ನಗರಗಳಲ್ಲೂ ಮದ್ದಳೆ ವಾದನದಿಂದ ಜನಮನ ಸೆಳೆದಿದ್ದಾರೆ.
ಆಕಾಶವಾಣಿಯಲ್ಲಿ ‘ಎ’ ಗ್ರೇಡ್ ಕಲಾವಿದರಾಗಿರುವ ಇವರು 2016-17 ನೇ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ 50 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದು ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಯಾಗಿ, ಅದರ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.