ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014 ಕ್ಕೆ ಸೂಕ್ತ ತಿದ್ದುಪಡಿ ಮಾಡಿ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮರು ಮೌಲ್ಯಮಾಪನ ಸಂಬಂಧ ವಿಶ್ವವಿದ್ಯಾಲಯ ಹೊರಡಿಸಿರುವ ಸುಗ್ರೀವಾಜ್ಞೆ ರದ್ದು ಕೋರಿ ನಗರದ ಬಿಎಂಎಸ್ ಕಾನೂನು ಕಾಲೇಜಿನ ಪ್ರಥಮ ವರ್ಷದ (ಮೂರು ವರ್ಷಗಳ ಪದವಿ ಕೋರ್ಸ್) ವಿದ್ಯಾರ್ಥಿನಿ ಕೆ.ವಿ.ನಿಯತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ವಿದ್ಯಾರ್ಥಿನಿ ಮರು ಮೌಲ್ಯಮಾಪನದಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಮತ್ತು ಆಕೆಗೆ ನ್ಯಾಯಯುತವಾಗಿ ಸಲ್ಲಬೇಕಾದ ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ಕೂಡಲೇ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ನಮನ್ ಎಂ.ವಂಕದಾರಿ ವಾದ ಮಂಡಿಸಿ, ಆನೇಕ ಕಾನೂನು ವಿದ್ಯಾರ್ಥಿಗಳು ಈ ಸುಗ್ರೀವಾಜ್ಞೆಗೆ ಬಲಿಯಾಗಿ ನಪಾಸಾಗುತ್ತಿದ್ದಾರೆ. ಪರೀಕ್ಷಾ ಸುಗ್ರೀವಾಜ್ಞೆ-2014ರ
ಖಂಡಿಕೆ 1.3.6ರಲ್ಲಿನ ವಿವರಣೆಯು ತರ್ಕಹೀನ, ಕಾನೂನು ಬಾಹಿರ, ಏಕಪಕ್ಷೀಯ, ಸಕಾರಣಗಳಿಲ್ಲದ ಮತ್ತು ಅಸಾಂವಿಧಾನಿಕ ನಡೆಯಾಗಿದ್ದು, ಅದನ್ನು ರದುಗೊಳಿಸಬೇಕು ಎಂದು ಕೋರಿದರು.ಪ್ರಕರಣದ ಹಿನ್ನೆಲೆ: ಆರ್ಜಿದಾರರು ‘ಲಾ ಆಫ್
ಟಾರ್ಟ್ಸ್’ ವಿಷಯದಲ್ಲಿ 80 ಅಂಕಗಳಿಗೆ 25 ಅಂಕ ಪಡೆದಿ ದ್ದರು. ಮರು ಮೌಲ್ಯಮಾಪನದಲ್ಲಿ 33 ಅಂಕ ಪಡೆದಿದ್ದರು. ಮರುಮೌಲ್ಯಮಾಪನದ ಅಂಕಗಳ ಅನ್ವಯ ತನ್ನನ್ನು ಉತ್ತೀರ್ಣ ಎಂದು ಘೋಷಿಸಬೇಕಿತ್ತು. ಆದರೆ, 2014ರ ನ. 5ರಂದು ಕಾನೂನು ವಿಶ್ವವಿದ್ಯಾಲಯ ಹೊರಡಿಸಿರುವ ಸುಗ್ರೀವಾಜ್ಞೆಯನ್ವಯ ಅನುತ್ತೀರ್ಣಗೊಳಿಸಲಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.