ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗವನ್ನು ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. 2025 ರ ಬಜೆಟ್ ಘೋಷಣೆಗಳಿಗೆ ಕೆಲವು ದಿನಗಳ ಮುಂಚಿತವಾಗಿ ಸರ್ಕಾರದ ಈ ನಿರ್ಧಾರ ಬಂದಿದೆ.

ಸರ್ಕಾರದ ಮೂಲಗಳ ಪ್ರಕಾರ, ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ. ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 65 ಲಕ್ಷ ಪಿಂಚಣಿದಾರರು ತಮ್ಮ ಪಿಂಚಣಿಯಲ್ಲಿ ಏರಿಕೆ ಕಾಣಲಿದ್ದಾರೆ. ರಕ್ಷಣೆ ಮತ್ತು ದೆಹಲಿ ಸರ್ಕಾರಿ ನೌಕರರು ಸೇರಿದಂತೆ ದೆಹಲಿಯ ಸುಮಾರು 4 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.

 

7ನೇ ವೇತನ ಆಯೋಗವನ್ನು 2016 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಅವಧಿಯು 2026 ರಲ್ಲಿ ಕೊನೆಗೊಳ್ಳಲಿದೆ. 7 ನೇ ವೇತನ ಆಯೋಗದ ಅವಧಿ ಮುಗಿಯುವ ಮುನ್ನ, ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಿಸಲು 8 ನೇ ವೇತನ ಆಯೋಗವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರು, ನೌಕರರ ಸಂಘಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ಗೆ 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದವು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಸರ್ಕಾರ 8ನೇ ವೇತನ ಆಯೋಗ ರಚನೆಗೆ ಸಮಿತಿ ರಚಿಸಲು ಅದಕ್ಕೂ ಮೊದಲೇ ಸಮ್ಮತಿ ಸೂಚಿಸಿದೆ. ಸಂಪ್ರದಾಯದಂತೆ 10 ವರ್ಷಗಳಿಗೊಮ್ಮೆ ಅಂದರೆ 2026ರ ಜನವರಿ 1 ರಿಂದ 8ನೇ ವೇತನ ಆಯೋಗದ ವರದಿ ಜಾರಿ ಮಾಡಲಾಗುತ್ತದೆ.