ಬೆಂಗಳೂರು :
ಇಂಧನ ಇಲಾಖೆಯು ಗೃಹಜ್ಯೋತಿಯ ಫ‌ಲಾನುಭವಿಗಳು ಬಾಡಿಗೆ ಮನೆ ಅಥವಾ ಮನೆ ಬದಲಾಯಿಸಿದ ಬಳಿಕವೂ ಗೃಹಜ್ಯೋತಿ ಯೋಜನೆ ಲಾಭ ಮುಂದುವರಿಸಲು ಅವಕಾಶ ಕಲ್ಪಿಸಿದೆ.
ಗೃಹ ಜ್ಯೋತಿ ಯೋಜನೆಯಿಂದ ಗ್ರಾಹಕರು ತಮ್ಮ ಖಾತೆಗಳನ್ನು ಡಿ-ಲಿಂಕ್ ಮಾಡಲು, ವಿಳಾಸ ಬದಲಾವಣೆ ಮತ್ತು ಶಿಫ್ಟಿಂಗ್‌ ನಂತರ ಮರು ಲಿಂಕ್ ಮಾಡಲು ಅವಕಾಶ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಿದ್ಯುತ್ ಸರಬರಾಜು ನಿಗಮಗಳಿಗೆ (ಎಸ್ಕಾಮ್‌ಗಳು) ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಸೇವಾಸಿಂಧು ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಂಡಿದ್ದ ಗೃಹಜ್ಯೋತಿ ಫ‌ಲಾನುಭವಿಗಳಿಗೆ ಡಿಲಿಂಕ್‌ ಮಾಡುವ ಅವಕಾಶ ಇರಲಿಲ್ಲ. ಆದರೆ ಈಗ ಸರ್ಕಾರ ಡಿಲಿಂಕ್‌ಗೆ ಅವಕಾಶ ಕಲ್ಪಿಸಿದೆ.
ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಾಗ ಅಥವಾ ಇತರ ಸಂದರ್ಭ ಈಗಾಗಲೇ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೂಂದು ಸ್ಥಾವರಕ್ಕೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್‌ ನಿಗಮಗಳು ಕ್ರಮ ಕೈಗೊಳ್ಳಬೇಕು ಇಂಧನ ಇಲಾಖೆಯು ಸೂಚಿಸಿದೆ. ಇನ್ನೊಂದು ವಾರದಲ್ಲಿ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.