ಘಟಪ್ರಭಾ: ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ ಪ್ರೈಸ್ ರೈಲು ನಿಲುಗಡೆಯಿಂದ ವೇಗದ ಪ್ರಯಾಣ ಒದಗಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಅವರು ಗುರುವಾರ ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಹುಬ್ಬಳ್ಳಿ-ಪುಣೆ ವಂದೇ ಭಾರತ ಎಕ್ಸ್ ಪ್ರೈಸ್ ರೈಲಿನ ನಿಲುಗಡೆಗೆ ಸ್ವಾಗತ ಹಾಗೂ ಹಸಿರು ನಿಶಾನೆ ತೋರಿಸಿ ಮಾತನಾಡಿ, ವಂದೇ ಭಾರತ ರೈಲು ನಿಲುಗಡೆಯಿಂದ ಪುಣೆ ಹಾಗೂ ಹುಬ್ಬಳ್ಳಿಗೆ ಪ್ರಯಾಣಿಸುವ ವ್ಯಾಪಾರಸ್ಥರಿಗೆ, ವೃತ್ತಿಪರರು ಹಾಗೂ ಸಾಮಾನ್ಯ ಪ್ರಯಾಣಿಕರಿಕೆ ಅನುಕೂಲವಾಗಲಿದೆ. ಬೆಳಗಾವಿ-ಮಿರಜ್ ನಡುವೆ ಘಟಪ್ರಭಾ ಅತಿದೊಡ್ಡ ರೈಲು ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣದ ಅಭಿವೃದ್ದಿಗೆ ಕೇಂದ್ರ ಸರ್ಕಾರವು ಅಮೃತ ಭಾರತ ನಿಲ್ದಾಣ ಯೋಜನೆಯಡಿ ೧೮.೨ ಕೋಟಿ ರೂಪಾಯಿ ಅನುದಾನದಲ್ಲಿ ಪುನರಾಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆ ಮಾಡಿ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಪಂಡರಪುರಕ್ಕೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಶವಂತಪುರ-ಪಂಡರಪುರ ರೈಲನ್ನು ಘಟಪ್ರಭಾ ಮತ್ತು ರಾಯಬಾಗ ನಿಲ್ದಾಣಗಳಿಗೆ ನಿಲುಗಡೆಯಾಗುತ್ತಿದೆ. ೯೩೦ ಕೋಟಿ ವೆಚ್ಚದಲ್ಲಿ ಲೊಂಡಾ-ಬೆಳಗಾವಿ-ಘಟಪ್ರಭಾ ಅಭಿವೃದ್ಧಿಪಡಿಸಲಾಗಿದೆ. ೯೨೭ ಕೋಟಿ ವೆಚ್ಚದಲ್ಲಿ ಧಾರವಾಡ-ಬೆಳಗಾವಿ ಮುಖಾಂತರ ಕಿತ್ತೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಘಟಪ್ರಭಾದಲ್ಲಿ ಏಕ್ಸ್ಪ್ರೆಸ್ ರೈಲುಗಳ ನಿಲುಗಡೆಯನ್ನು ಹೆಚ್ಚಾಗಿ ಮಾಡಲು ಪ್ರಯತ್ನಿಸಲಾಗುವುದೆಂದು ಹೇಳಿದರು.ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರು ಮಾತನಾಡಿ, ಈ ಭಾಗದ ಜನರ ಒತ್ತಡದಿಂದ ಕೇಂದ್ರ ರೈಲ್ವೆ ಸಚಿವರು ಘಟಪ್ರಭಾದಲ್ಲಿ ವಂದೇ ಭಾರತ್ ರೈಲ್ವೆ ನಿಲುಗಡೆಗೆ ಅನುಮತಿ ನೀಡಿದ್ದು ಈಗ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸಿದರೆ ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಇಲ್ಲಿನ ಮೂರು ಸಾವಿರಮಠದ ಆಸ್ಪತ್ರೆ , ನಾ.ಸು.ಹರ್ಡೀಕರ ಸ್ಥಾಪಿಸಿದ ಸೇವಾದಳ, ಕರ್ನಾಟಕ ಆರೋಗ್ಯಧಾಮ ಹಾಗೂ ಇಲ್ಲಿನ ನಿಸರ್ಗೋಪಚಾರ ಕೇಂದ್ರದಿಂದ ಘಟಪ್ರಭಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ದಿ.ಸಂಸದ ಸುರೇಶ ಅಂಗಡಿಯವರು ರೈಲ್ವೆ ಸಚಿವರಾಗಿದ್ದಾಗ ಈ ಭಾಗದಲ್ಲಿ ರೈಲ್ವೇ ಇಲಾಖೆಯ ತುಂಬಾ ಕೆಲಸಗಳಾಗಿದ್ದು ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಹೋಗುವ ರೈಲು ಸೇರಿ ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಈ ಭಾಗದಲ್ಲಿ ಮಾಡಬೇಕಾಗಿದೆ.
ರೈಲ್ವೆ ಇಲಾಖೆಯ ಅಧಿಕಾರಿ ವಾಣಿಜ್ಯ ವ್ಯವಸ್ಥಾಪಕರಾದ ಅನುಪು ದಯಾನಂದ ಸಾಧು, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಸುಭಾಸ್ ಪಾಟೀಲ, ಮಾರುತಿ ವಿಜಯನಗರ, ಬಸವರಾಜ ಹಟ್ಟಿಗೌಡರ, ಕಾಡಪ್ಪ ಕರೋಶಿ, ಸುರೇಶ ಕಾಡದವರ, ಸೇರಿ ಸಾರ್ವಜನಿಕರು ರೈಲ್ವೇ ಅಧಿಕಾರಿಗಳು ಹಾಜರಿದ್ದರು.