ಬೆಳಗಾವಿ: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿಯರ ಜೊತೆ ಸಂವಾದ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

*ಮನೆಯಲ್ಲಿ ಕಲಹ ತಂದಿದೆ ಎಂಬ ಬಿಜೆಪಿ ಆರೋಪ ಸುಳ್ಳು*

ಇಂದು ಗೃಹಲಕ್ಷ್ಮಿ ಯೋಜನೆಯ ಹಣದಿಂದ ನಾನಾ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25 ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ. ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳ ಜೀವನದಲ್ಲಿ ಆಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ. ಬದುಕಿಗೆ ಹೊಸ ಚೈತನ್ಯ ನೀಡಿದ ಗೃಹಲಕ್ಷ್ಮಿ ಯೋಜನೆಯನ್ನು ಸಾಕಾರಗೊಳಿಸಿದ ಮುಖ್ಯಮಂತ್ರಿಗಳು, ಇಲಾಖೆಯ ಸಚಿವರು ಹಾಗೂ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಗೃಹಲಕ್ಷ್ಮಿಯರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಿಂದ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅತ್ತೆಸೊಸೆಯರೇ ಜೊತೆ ಜೊತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯೋಜನೆಯಿಂದ ತಮಗಾಗಿರುವ ಲಾಭದ ಬಗ್ಗೆ ಮಾತನಾಡಿದ್ದಾರೆ.

ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾರಣದ ಬಗ್ಗೆ ಮಾಧ್ಯಮದವರಿಗೆ ಉತ್ತರಿಸಿ, ಬೆಂಗಳೂರು ನಗರದ ರಸ್ತೆಗಳ ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಎಂದರು.

*ಬಿಜೆಪಿಯವರು ಸಂವಿಧಾನ ವಿರೋಧಿಗಳು*

*ಎಐಸಿಸಿ ಅಧಿವೇಶನಕ್ಕೆ ಅಡ್ಡಿಪಡಿಸಿದರೆ ಕಾನೂನಿನ ರೀತಿ ಕ್ರಮ*

ಎಐಸಿಸಿ ಅಧಿವೇಶನದ ದಿನವೇ , ಬಿಜೆಪಿಯವರು ವಕ್ಫ್ ಹೋರಾಟ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸದೇ ಹೋಗಿದ್ದರೆ, ಎಲ್ಲರೂ ಸ್ವತಂತ್ರವಾಗಿರಲು ಸಾಧ್ಯವಾಗುತ್ತಿತ್ತೇ? ಸಂವಿಧಾನ ರಚನೆಯಾದ ನಂತರವೇ ಇಂತಹ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗಿರುವುದು.

ಗೋಲ್ವಾಲ್ಕರ್, ಹೆಡಗೆ, ಸಾವರ್ಕರ್ ಯವರು ಸೇರಿದಂತೆ ಬಿಜೆಪಿಯವರು ಸಂವಿಧಾನ ವಿರೋಧಿಗಳು. ಭಾರತೀಯತೆಯಲ್ಲಿ ನಂಬಿಕೆಯಿರಿಸದಿರುವ ಇವರು ಮನುಸ್ಮೃತಿಗೆ ಒತ್ತು ನೀಡುವವರಾಗಿದ್ದಾರೆ. ನಮ್ಮ ಮಹಾತ್ಮಾಗಾಂಧಿ ಆಧರಿಸಿದ ಎಐಸಿಸಿ ಅಧಿವೇಶನವನ್ನು ಅಡ್ಡಿಪಡಿಸಿದರೆ ಕಾನೂನಿನ ರೀತಿ ಕ್ರಮಕೈಗೊಳ್ಳಲಾಗುವುದು ಎಂದರು.

*ರಾಜಕಾರಣಕ್ಕಾಗಿ ಅಧಿವೇಶನವನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ*

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯವರು ಪದೇ ಪದೇ ಹೋರಾಟ ಮಾಡಿ ಅಡ್ಡಿಪಡಿಸುತ್ತಿರುವ ಬಗ್ಗೆ ಉತ್ತರಿಸಿ, ವಿರೋಧಪಕ್ಷವಾಗಿ ಬಿಜೆಪಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ , ಸರ್ಕಾರದ ತಪ್ಪು ಒಪ್ಪುಗಳ ಬಗ್ಗೆ ಮಾತನಾಡಬೇಕು. ಆದರೆ ಅದನ್ನು ಹೊರತುಪಡಿಸಿ , ರಾಜಕೀಯ ಕಾರಣಗಳಿಗಾಗಿ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

*ಸಿಬಿಐಗೆ ವಹಿಸಿ ಎಂದು ಹೇಳಲು ಬಿಜೆಪಿಗೆ ನೈತಿಕತೆ ಇಲ್ಲ*

150 ಕೋಟಿ ಆಫರ್ ಹಾಗೂ ವಕ್ಫ್ ಪ್ರಕರಣಗಳನ್ನು ಸಿಬಿಐಗೆ ನೀಡಲಿ ಎಂದು ಬಿಜೆಪಿಯ ವಿಜಯೇಂದ್ರ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 2008 ರಿಂದ 2013ರವರೆಗೆ ಹಾಗೂ 2018 ರಿಂದ 2023ರವರೆಗೆ ಬಿಜೆಪಿಯವರು ಯಾವುದಾದರೂ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆಯೇ? ಅವರಿಗೆ ಈ ರೀತಿ ಹೇಳಲು ಯಾವುದೇ ನೈತಿಕತೆ ಇಲ್ಲ ಎಂದರು.

 

* *ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*
* *ಕಾರ್ಯಕರ್ತೆಯರ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ*
* *ವೇತನ ಹೆಚ್ಚಳದ ಬಗ್ಗೆ ಸಿಎಂ ಜೊತೆ ಚರ್ಚೆ*

*ಬೆಳಗಾವಿ* : ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದ ಕೊಂಡಸಕೊಪ್ಪ ಬಳಿ ನಡೆದ ಅಂಗನವಾಡಿ ನೌಕರರ ಬೆಳಗಾವಿ ಚಲೋ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವರು, ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತರಿಗೆ ವಿಮಾ ಯೋಜನೆ ಜಾರಿ, ವೇತನ ಪರಿಷ್ಕರಣೆ, ಮೊಟ್ಟೆ ದರ ಪರಿಷ್ಕರಣೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ಗೃಹಲಕ್ಷ್ಮೀ ಯೋಜನೆಯನ್ನು ನಮ್ಮ ಇಲಾಖೆಯಿಂದ ಜಾರಿಗೆ ತರುವ ಮೂಲಕ ಬಲಿಷ್ಠರಾಗಿದ್ದೇವೆ. ವೇತನ ಹೆಚ್ಚಳ ಏರಿಕೆ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಎನ್.ಸಿದ್ದೇಶ್ವರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್‌, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

* ಮುಖ್ಯಮಂತ್ರಿಗಳಿಗೆ ಗೃಹಲಕ್ಷ್ಮೀಯರನ್ನು ಪರಿಚಯಿಸಿಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
*ಯೋಜನೆಯ ಸದುಪಯೋಗಕ್ಕೆ ಸಂತೋಷ ವ್ಯಕ್ತಪಡಿಸಿದ ಸಿಎಂ
* ಮುಖ್ಯಮಂತ್ರಿ, ಸಚಿವರಿಗೆ ಧನ್ಯವಾದ ಅರ್ಪಿಸಿದ ಫಲಾನುಭವಿಗಳು

ಬೆಳಗಾವಿ: ಕರ್ನಾಟಕ ಸರ್ಕಾರದ ಬಹು ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮೀ ಯೋಜನೆ ಕಳೆದ ಒಂದೂವರೆ ವರ್ಷಗಳಿಂದ ಮನೆಮಾತಾಗಿದೆ. ಸುಮಾರು 1.25 ಕೋಟಿ ಮಹಿಳೆಯರಿಗೆ ಪ್ರತಿತಿಂಗಳು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಹಣ ಸಂದಾಯವಾಗುತ್ತಿದೆ. ಯೋಜನೆಯ ಹಣವನ್ನು ವಿವಿಧ ರೀತಿಯಲ್ಲಿ ಸದುಪಯೋಗಪಡಿಸಿಕೊಂಡ ಆಯ್ದ 21 ಫಲಾನುಭವಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಿಚಯಿಸಿಕೊಟ್ಟರು.

* ಫಲಾನುಭವಿಗಳಿಗೆ ಸಿಎಂ ಶಹಬ್ಬಾಸ್‌ ಗಿರಿ
ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಬೋರ್‌ವೆಲ್‌ ಕೊರೆಸಿದ ಗದಗ ಜಿಲ್ಲೆಯ ಗಜೇಂದ್ರಗಢದ ಅತ್ತೆ-ಸೊಸೆ ಮಾಬುಬಿ ಹಾಗೂ ರೋಷನ್‌ ಬೇಗಂ ಅವರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು. ಗೃಹಲಕ್ಷ್ಮೀ ಯೋಜನೆ ಹಣದಿಂದ ಅತ್ತೆ-ಸೊಸೆ ನಡುವೆ ಜಗಳ ಆಗಲಿದೆ ಎನ್ನುತ್ತಿದ್ದ ವಿಪಕ್ಷಗಳ ಅಪಪ್ರಚಾರಕ್ಕೆ ಇದು ತಿರುಗೇಟಾಗಿದೆ ಎಂದು ಸಚಿವರು ಹೇಳಿದರು.

ವಿದ್ಯಾಥಿಗಳ ಅನುಕೂಲಕ್ಕಾಗಿ ಲೈಬ್ರರಿ ಆರಂಭಿಸಿದ ರಾಯಭಾಗದ ಮಲ್ಲವ್ವಾ ಮೇಟಿ, ಫ್ಯಾನ್ಸಿ ಸ್ಟೋರ್‌ ಆರಂಭಿಸಿದ ಶಿಗ್ಗಾವ್‌ನ ದ್ರಾಕ್ಷಾಯಣಿ ಪಾಟೀಲ್‌, ತರಕಾರಿ ವ್ಯಾಪಾರ ಆರಂಭಿಸಿದ ಬಾಗಲಕೋಟೆಯ ಮುಧೋಳದ ಗೌರಿ ಕೃಷ್ಣಾ ಲಮಾಣಿ ಸೇರಿದಂತೆ ಪ್ರತಿಯೊಬ್ಬರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು.

ಗೃಹಲಕ್ಷ್ಮೀ ಯೋಜನೆ ಪಡೆದ ಲಿಂಗತ್ವ ಅಲ್ಪಸಂಖ್ಯಾತರು ಇದೇ ವೇಳೆ ಉಪಸ್ಥಿತಿದ್ದರು.

ನಾಡಿನ ದೊರೆಯನ್ನು ಹತ್ತಿರದಿಂದ ನೋಡುತ್ತಿದ್ದಂತೆಯೇ ಫಲಾನುಭವಿಗಳು ಪುಳಕಗೊಂಡರು. ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.

 

– *ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸುವರ್ಣವಿಧಾನಸೌಧಕ್ಕೆ ಬಂದ ಸಚಿವರು*
– *ಫಲಾನುಭವಿಗಳೊಂದಿಗೆ ವಾಹನದಲ್ಲಿ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
– ಸಚಿವರ ಕಾರ್ಯಕ್ಕೆ ಫಲಾನುಭವಿಗಳು ಫುಲ್ ಖುಷ್

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ ಆಯ್ದ ಕೆಲವು ಫಲಾನುಭವಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.

ಕುವೆಂಪು ನಗರದಲ್ಲಿರುವ ನಿವಾಸದಿಂದ ಸುವರ್ಣ ವಿಧಾನಸೌಧಕ್ಕೆ ವಿಶೇಷ ವಾಹನದಲ್ಲಿ ಫಲಾನುಭವಿಗಳೊಂದಿಗೆ ಸಚಿವರು ಆಗಮಿಸಿದರು.

ಗೃಹ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಎಲ್ಲರಿಗೂ ಯೋಜನೆಗಳನ್ನು ತಲುಪಿಸುವುದೇ ನಮ್ಮ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪವಂತಾಗಬೇಕು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು ಸಿಗುವ 2 ಸಾವಿರ ರೂಪಾಯಿ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಹಾಯವಾಗಿದೆ. ಒಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಂಥಾಲಯ ತೆರೆದರೆ, ಗದಗ ಗಜೇಂದ್ರದಢದ ಅತ್ತೆ-ಸೊಸೆ ಸೇರಿ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ, ವೈದ್ಯಕೀಯ ಖರ್ಚು ವೆಚ್ಚಗಳು, ಮಕ್ಕಳಿಗೆ ಶಾಲಾ ಫೀಜು, ಮಕ್ಕಳಿಗೆ ಬೈಕ್ ಕೊಡಿಸಿರುವುದು.. ಹೀಗೆ ಅನೇಕ ರೂಪದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಬಡ ಮಹಿಳೆಯರಿಗೆ ಸಹಾಯವಾಗುತ್ತಿದೆ ಎಂದು ‌ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗೃಹಲಕ್ಷ್ಮೀಯರ ಜೊತೆಗೆ ತೃತೀಯ ಲಿಂಗಿಯರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಸುವ ಕೆಲಸ ಆಗುತ್ತಿದೆ. ಯೋಜನೆಯಿಂದ ಆದ ಲಾಭದ ಬಗ್ಗೆ ಫಲಾನುಭವಿಗಳು ಹೇಳಿಕೊಳ್ಳುವಾಗ ಯೋಜನೆ ಜಾರಿಗೆ ತಂದಿದ್ದಕ್ಕೂ ಸಾರ್ಥಕ ಎನಿಸುತ್ತದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದೇ ನಮ್ಮ ಆಸೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಗೃಹಲಕ್ಷ್ಮೀ ಫಲಾನುಭವಿಗಳು ಸಂವಾದ ನಡೆಸಲಿದ್ದು, ವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಣೆ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.

– *ಸಚಿವರಿಗೆ ದೃಷ್ಟಿ ತೆಗೆದ ಮಂಗಳಮುಖಿಯರು*
ಮಂಗಳಮುಖಿಯರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ದೃಷ್ಟಿ ತೆಗೆದು ಶುಭ ಹಾರೈಸಿದರು.

ನಿಮ್ಮಿಂದ ನಮಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಸಿಗುತ್ತಿದೆ. ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಚಿವರಿಗೆ ಕೈಮುಗಿದ ಧನ್ಯವಾದ ಅರ್ಪಿಸಿದರು.

ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ಗೃಹಲಕ್ಷ್ಮಿಯ ಹಣ ಕೂಡಿಟ್ಟು, ಮಗನಿಗೆ ಬೈಕ್ ಕೊಡಿಸಲು ನೀಡಿರುವ ಹಿನ್ನೆಲೆಯಲ್ಲಿ ಅವರ ಮಗ ಬೆಳಗಾವಿಯ ಸಚಿವರ ನಿವಾಸಕ್ಕೆ ಆಗಮಿಸಿ, ಬೈಕ್ ತೋರಿಸಿ, ಖುಷಿ ಹಂಚಿಕೊಂಡರು.
ನಂತರ ಸಚಿವರು ಗೃಹಲಕ್ಷ್ಮೀಯರ ಜೊತೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು.