ತುಳುನಾಡಿನ ಪ್ರಸಿದ್ಧ ದೈವದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಭೂತಾರಾಧನೆಯು ಬಹಳ ಜನಜನಿತವಾಗಿದೆ. ಕೊರಗಜ್ಜ ತುಳುನಾಡಿನ ಪ್ರಸಿದ್ಧ ದೈವವಾಗಿದ್ದು ಜನ ಬಹಳ ನಂಬುತ್ತಾರೆ. ಕೊರಗಜ್ಜ ಸೇರಿದಂತೆ ವಿವಿಧ ತುಳುನಾಡಿನ ದೈವಗಳ ಗುಡಿಗಳನ್ನು ಇತರ ಪ್ರದೇಶಗಳಲ್ಲಿ ಕಟ್ಟುವುದಕ್ಕೆ, ಭೂತಕೋಲ, ನೇಮಗಳನ್ನು ಆಚರಿಸುವುದಕ್ಕೆ ತುಳುನಾಡಿನ ದೈವಾರಾಧಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತುಳುನಾಡಿಗೆ ಸೀಮಿತವಾದ ದೈವಗಳ ಗುಡಿಗಳನ್ನು ಬೇರೆಡೆ ಕಟ್ಟುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಮಲೆನಾಡು, ಬಯಲುಸೀಮೆಯ ಕೆಲವು ಕಡೆಗಳಲ್ಲಿ ಕೊರಗಜ್ಜ ಸೇರಿದಂತೆ ಕೆಲವು ಕಾರಣಿಕ ದೈವಗಳ ದೈವಸ್ಥಾನಗಳನ್ನು ಕಟ್ಟಲಾಗಿದೆ.ಇದೀಗ ಮೈಸೂರಿನಲ್ಲಿ ಕಟ್ಟಿರುವ ದೈವಸ್ಥಾನವನ್ನು ಜಿಲ್ಲಾಡಳಿತವೂ ಕೆಡವಿದೆ.

ಮೈಸೂರು: ಕಳೆದ ಕೆಲ ವರ್ಷದಿಂದ ಮೈಸೂರಿನಲ್ಲಿ ಬಹಳ ಪ್ರಖ್ಯಾತಿ ಪಡೆದಿದ್ದ ಕೊರಗಜ್ಜ ಸ್ವಾಮಿ ದೈವಸ್ಥಾನ ವನ್ನ ಕೆಡವಲಾಗಿದೆ.
ರಾಜ ಕಾಲುವೆ ಮೇಲೆ ನಿರ್ಮಿಸಲಾಗಿದೆ ಎನ್ನಲಾದ ಸ್ವಾಮಿ ಕೊರಗಜ್ಜ ದೈವಸ್ಥಾನವನ್ನು ಮೈಸೂರು ಜಿಲ್ಲಾಡಳಿತ ಮಂಗಳವಾರ ನೆಲಸಮ ಮಾಡಿದೆ. ಈ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ್ದ ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರ ಆದೇಶದಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ದೇವಾಲಯವನ್ನು ನೆಲಸಮ ಮಾಡಿದ್ದಾರೆ.ಮೈಸೂರಿನ ಹೊರವಲಯದ ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60ರಲ್ಲಿ ಹಾದುಹೋಗಿದ್ದ ರಾಜ ಕಾಲುವೆ ಒತ್ತುವರಿ ಆಗಿದೆ ಎಂಬ ದೂರು ತಾಲೂಕು ಆಡಳಿತಕ್ಕೆ ಬಂದಿತ್ತು.

ಅಕ್ರಮವಾಗಿ ದೇವಾಲಯ ನಿರ್ಮಿಸಲಾಗಿದೆ ಎಂಬ ಬಗ್ಗೆ ಸಹಾ ದೂರು ಇತ್ತು. ರಾಜ ಕಾಲುವೆ ಒತ್ತುವರಿ ದೃಢ ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರಕ್ಷಿತ್ ಒತ್ತುವರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಒತ್ತುವರಿ ತೆರುವುಗೊಳಿಸುವಂತೆ ಆದೇಶಿಸಿದ್ದರು.

ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಜಯಪುರ ಠಾಣೆ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೊರಗಜ್ಜ ದೈವಸ್ಥಾನವನ್ನು ನೆಲಸಮಗೊಳಿಸಿ ತೆರವುಗೊಳಿಸಿದ್ದಾರೆ. ಮೈಸೂರಿನ ಕೊರಗಜ್ಜ ದೈವಸ್ಥಾನವು ಕಳೆದ ಕೆಲ ದಿನಗಳಿಂದ ಬಾಗಿಲು ತೆಗೆದಿರಲಿಲ್ಲ.

ದೈವಸ್ಥಾನದ ಟ್ರಸ್ಟಿಗಳ ನಡುವೆ ವೈಮನಸ್ಸು ಮತ್ತು ಸಾಂಸಾರಿಕ ಕಾರಣಕ್ಕೆ ದೈವಾರಾಧಕ ತೇಜುಕುಮಾರ್ ದೈವಸ್ಥಾನಕ್ಕೆ ಬೀಗ ಹಾಕಿದ್ದರು. ಹಾಗೆಯೇ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ದೈವಾರಾಧಕ ತೇಜುಕುಮಾರ್ ಮತ್ತು ಅವರ ಪತ್ನಿ ನಡುವೆಯೂ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ರು. ತೇಜ್ ಕುಮಾರ್ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಚರ್ಚೆ ನಡೆದಿತ್ತು. ಇದೀಗ ದೈವಸ್ಥಾನವನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ.ಈ ಕಾರ್ಯಾಚರಣೆಯಲ್ಲಿ ಜಯಪುರ ಹೋಬಳಿ ಉಪ ತಹಸೀಲ್ದಾರ್ ನಿಂಗಪ್ಪ, ರಾಜಸ್ವ ನಿರೀಕ್ಷ ಲೋಹಿತ್, ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು, ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಗರಮಾಪನ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯ ಜಯಪುರ ಪೋಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.