ಬೆಳಗಾವಿ : ಕನ್ನಡದ ದೀಪ ಹಚ್ಚಿದ ಕವಿ ಡಾ ಡಿ ಎಸ್ ಕರ್ಕಿಯವರ ೧೧೭ ಜನ್ಮದಿನೋತ್ಸವದ ಅಂಗವಾಗಿ ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ ರಾಜ್ಯಮಟ್ಟದ ಡಾ ಡಿ ಎಸ್‌ ಕರ್ಕಿ ಕಾವ್ಯಶ್ರೀ ಪ್ರಶಸ್ತಿ-೨೦೨೪ ಕ್ಕೆ ನಾಡಿನ ಚಿರಪರಿಚಿತ ಮಕ್ಕಳ ಸಾಹಿತಿ ವಿಜಯಪುರದ ಶ್ರೀ ಹ ಮ ಪೂಜಾರರು ಆಯ್ಕೆಯಾಗಿದ್ದಾರೆ ದಿನಾಂಕ ೨೧-೧೧-೨೦೨೪ ರಂದು ಸಂಜೆ ೫.೦೦ ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಸಾಂಸ್ಕೃತಿಕ ಚಿಂತಕ ಪ್ರಾ ಬಿ ಎಸ್‌ ಗವಿಮಠ,ಹಿರಿಯ ಕವಿ ಪ್ರೊ ಎಂ ಎಸ್‌ ಇಂಚಲ ಉಪಸ್ಥತರಿರುವರು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಜಗದ್ಗುರು ಡಾ ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು ಸ ರಾ ಸುಳಕೂಡೆ,ಅಶೋಕ ಉಳ್ಳೆಗಡ್ಡಿ, ಬಸವರಾಜ ಗಾರ್ಗಿ ಗೌರಮ್ಮ ಕರ್ಕಿ ಮುಂತಾದವರು ಹಾಜರಿದ್ದರೆಂದು ಪ್ರತಿಷ್ಠಾನದ ಅಧ್ಯಕ್ಷ ಶಿವಪುತ್ರ ದುಂಡಪ್ಪ ಕರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹ. ಮ. ಪೂಜಾರ – 13 /3/1943 ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದ ಹಣುಮಂತ್ರಾಯ ಮನ್ನಪ್ಪ ಪೂಜಾರ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಸಾಹಿತ್ಯ, ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.
15 ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯದ ಅರ್ಥಪೂರ್ಣ ಕೃತಿಗಳನ್ನು ರಚಿಸಿದ್ದಾರೆ. 7 ಕೃತಿಗಳನ್ನು ಸಂಪಾಡಿಸಿದ್ದಾರೆ. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅವರ ಮಕ್ಕಳ ಕಥೆ, ಕವನ, ಲೇಖನಗಳು ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ಸರ್ಕಾರದ ಪ್ರಾಥಮಿಕ ಪಠ್ಯಗಳಲ್ಲಿ ಅವರ ಕಥೆ ಕವನಗಳು ಪ್ರಕಟಗೊಂಡಿವೆ. ಶಿಕ್ಷಕ ವೃತ್ತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾದ ಶ್ರೀ ಹ. ಮ. ಪೂಜಾರರಿಗೆ ಸಾಹಿತ್ಯ ಸೇವೆಗಾಗಿ ಡೆಪ್ಯೂಟಿ ಚನ್ನಬಸಪ್ಪ , ಶಿಕ್ಷಣಸಿರಿ, ಶ್ರೀಗುರು, ಮಕ್ಕಳಮಿತ್ರ ಮುಂತಾದ 12 ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ, ಅಲ್ಲದೆ ಸಾಹಿತ್ಯ ಸಮ್ಮೇಳನ ಮತ್ತು ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷತೆಗಳು ಅವರಿಗೆ ಒಲಿದಿವೆ. ಮಕ್ಕಳ ಬಳಗ ಮತ್ತು ವಿದ್ಯಾಚೇತನ ಪ್ರಕಾಶನಗಳನ್ನು ಹುಟ್ಟುಹಾಕಿ ತಮ್ಮ ನಿವೃತ್ತಿವೇತನವನ್ನು ಮಕ್ಕಳ ರಂಗದ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಮಕ್ಕಳ ಸ್ಪೂರ್ತಿ ಚೇತನ ಹ ಮ ಪೂಜಾರ.