ಮಂಡ್ಯ:

ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಸಂಘ ಪರಿವಾರದ ಸದಸ್ಯರು ಗುರುವಾರ ಕೆರಗೋಡು ಗ್ರಾಮ ಹಾಗೂ ಮಂಡ್ಯ ನಗರ ಬಂದ್‌ ಆಚರಿಸಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಬಂದ್‌ನಿಂದ ದೂರ ಸರಿದಿದ್ದಾರೆ.

ಗ್ರಾಮದ ರಂಗಮಂದಿರದ ಮುಂದೆ ಸ್ಥಾಪಿಸಿರುವ 108 ಅಡಿ ಧ್ವಜಸ್ತಂಭದಲ್ಲಿಯೇ ಹನುಮ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿ ವಿಎಚ್‌ಪಿ, ಭಜರಂಗದಳ, ಭಜರಂಗ ಸೇನೆ, ಶ್ರೀರಾಮಸೇನೆ ಕಾರ್ಯಕರ್ತರು ಬಂದ್‌ಗೆ ಕರೆ ಕೊಟ್ಟಿದ್ದಾರೆ.

ಕಾರ್ಯಕರ್ತರು ಗುರುವಾರ ವರ್ತಕರು, ಆಟೊ ಚಾಲಕರನ್ನು ಭೇಟಿಯಾಗಿ ಬಂದ್‌ಗೆ ಬೆಂಬಲ ನೀಡುವಂತೆ ಕೋರಿದರು. ‘ಬಂದ್‌ ಬಗ್ಗೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದೇವೆ’ ಎಂದು ವರ್ತಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಭಾಕರ್‌ ತಿಳಿಸಿದರು.

‘ಕೆರಗೋಡು ಗ್ರಾಮದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್‌ ರ‍್ಯಾಲಿ ಮೂಲಕ ಕಾರ್ಯಕರ್ತರು ನಗರಕ್ಕೆ ಬರಲಿದ್ದಾರೆ. ನಗರದ ವೀರಾಂಜನೇಯ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗುವುದು’ ಎಂದು ಸಂಘ ಪರಿವಾರದ ಮುಖಂಡರು ತಿಳಿಸಿದ್ದಾರೆ.

ಬಿಜೆಪಿ, ಜೆಡಿಎಸ್‌ ಬೆಂಬಲ ಇಲ್ಲ: ಬಂದ್‌ ಆಚರಣೆಯಿಂದ ಬಿಜೆಪಿ, ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಹಿಂದೆ ಸರಿದಿದ್ದಾರೆ. ‘ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದೇವೆ’ ಎಂದು ಬಿಜೆಪಿ ಮುಖಂಡರು ತಿಳಿಸಿದರು. ‘ಪಕ್ಷದ ವರಿಷ್ಠರಿಂದ ಸೂಚನೆ ಬಾರದಿರುವುದರಿಂದ ಬಂದ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ಜೆಡಿಎಸ್‌ ಮುಖಂಡರು ತಿಳಿಸಿದರು.

‘ಬಂದ್‌ ಅಂಗವಾಗಿ ಬಲವಂತದಿಂದ ಅಂಗಡಿ ಮುಂಗಟ್ಟು ಮುಚ್ಚಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಮುಂದುವರಿದಿದೆ, ಮಂಡ್ಯದಲ್ಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.