ಮುಂಬೈ :
ಮುಂಬೈ ಇಂಡಿಯನ್ಸ್‌ ತಂಡ 2024ರ ಐಪಿಎಲ್‌ಗೆ ತನ್ನ ನಾಯಕನನ್ನು ಬದಲಾವಣೆ ಮಾಡಿದೆ. ಮುಂದಿನ ಐಪಿಎಲ್‌ನಲ್ಲಿ ಅನುಭವಿ ರೋಹಿತ್‌ ಶರ್ಮ ಬದಲು, ಇತ್ತೀಚೆಗೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು 2024ರ ಐಪಿಎಲ್‌ಗೆ ನಾಯಕನನ್ನಾಗಿ ಘೋಷಣೆ ಮಾಡಿದೆ.

ರೋಹಿತ್‌ ಶರ್ಮ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿತ್ತು. 2013ರ ಐಪಿಎಲ್‌ನ ನಡುವೆಯೇ ರೋಹಿತ್‌ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ನಾಯಕರನ್ನಾಗಿ ಘೋಷಣೆ ಮಾಡಿತ್ತು.2013ರ ಋತುವಿನ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್ ಪರವಾಗಿ 92 ಪಂದ್ಯವಾಡಿದ್ದರು. ಆ ಬಳಿಕ ಅವರು ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ವರ್ಗಾವಣೆಯಾಗಿದ್ದರು.

2022 ಹಾಗೂ 2023ರಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅವರು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ತಂಡ ಎರಡೂ ಭಾರಿಯೂ ಫೈನಲ್‌ನಲ್ಲಿ ಅಡಿತ್ತು. 2022ರಲ್ಲಿ ಪಾದಾರ್ಪಣೆ ಮಾಡಿದ್ದ ಋತುವಿನಲ್ಲಿಯೇ ತಂಡ ಚಾಂಪಿಯನ್ ಆಗಿತ್ತು.

ನಾಯಕತ್ವ ಬದಲಾವಣೆಯ ಕುರಿತು ಮಾತನಾಡಿದ ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಮಹೇಲಾ ಜಯವರ್ಧನೆ, “ಇದು ಪರಂಪರೆ ನಿರ್ಮಾಣದ ಭಾಗವಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಮುಂಬೈ ಇಂಡಿಯನ್ಸ್‌ ತನ್ನ ತತ್ವಕ್ಕೆ ಬದ್ಧವಾಗಿದೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಸಚಿನ್‌ನಿಂದ ಅಸಾಧಾರಣ ನಾಯಕತ್ವವನ್ನು ಪಡೆದಿದೆ. ಹರ್ಭಜನ್ ಸಿಂಗ್‌ ಅವರಿಂದ ರಿಕಿಗೆ, ರಿಕಿಯಿಂದ ರೋಹಿತ್ಗೆ, ತಕ್ಷಣದ ಯಶಸ್ಸಿಗೆ ಕೊಡುಗೆ ನೀಡುವಾಗ ಯಾವಾಗಲೂ ತಂಡವನ್ನು ಭವಿಷ್ಯಕ್ಕಾಗಿ ಬಲಪಡಿಸುವ ಮೇಲೆ ಕಣ್ಣಿಟ್ಟಿದ್ದಾರೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2024 ರ ಋತುವಿಗಾಗಿ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.

 

“ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ; 2013 ರಿಂದ ಮುಂಬೈ ಇಂಡಿಯನ್ಸ್‌ನ ನಾಯಕರಾಗಿ ಅವರ ಅಧಿಕಾರಾವಧಿಯು ಪ್ರಮುಖವಾದದು. ಅವರ ನಾಯಕತ್ವವು ತಂಡಕ್ಕೆ ಅಪ್ರತಿಮ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲದೆ ಅವರ ಸ್ಥಾನವನ್ನು ಗಟ್ಟಿಗೊಳಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಅವರು ಕೂಡ ಒಬ್ಬರು’ ಎಂದು ಹೇಳಿದ್ದಾರೆ.