ಬೆಂಗಳೂರು: ಅನುದಾನ ಹಂಚಿಕೆಯ ಪಟ್ಟಿಯನ್ನು ನೋಡಿದಾಗ ಕರಾವಳಿ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ತೀವ್ರ ಅನ್ಯಾಯ ಮಾಡಿದೆ. ಅಭಿವೃದ್ಧಿ ವಿಷಯವನ್ನು ರಾಜಕಾರಣಕ್ಕೆ ತೆಗೆದುಕೊಂಡು ಹೋಗಬೇಡಿ ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ಸಲ ಸುರಿದ ಮಳೆಗೆ ಕರಾವಳಿ ಜಿಲ್ಲೆಗಳ ರಸ್ತೆಗಳು ವಾಹನ ಸಂಚರಿಸಲು ಆಗದಷ್ಟು ಹದಗೆಟ್ಟು ಹೋಗಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಅನುದಾನ ಹಂಚಿಕೆಯಲ್ಲಿ ತೀವ್ರ ಅನ್ಯಾಯ ಆಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳು ಅತಿವೃಷ್ಟಿಯಾಗುವ ಜಿಲ್ಲೆಗಳಾಗಿವೆ. ಆದರೆ, ಬೇರೆ ಜಿಲ್ಲೆಗಳಿಗೆ ಪ್ಯಾಕೇಜ್ ನೀಡಲಾಗಿದೆ. 371-ಜೆ ಮತ್ತು ನಂಜುಂಡಪ್ಪ ವರದಿ ಪ್ರಕಾರ ಎಲ್ಲಾ ಜಿಲ್ಲೆಗಳನ್ನು ಸರಿ ಸಮಾನವಾಗಿ ತೆಗೆದುಕೊಂಡು ಹೋಗಬೇಕು. ಅತ್ಯಂತ ಹೆಚ್ಚು ಮಳೆ ಬೀಳುವ ಕರಾವಳಿ ಜಿಲ್ಲೆಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದು ಸರಕಾರ ಗಮನಹರಿಸಬೇಕು. ಈ ಕೂಡಲೇ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.