ಬೆಂಗಳೂರು :
ನಾವು ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 77 ಸಾವಿರ ಕೋಟಿ ಹೂಡಿಕೆ ಬಂದಿರುವುದೇ ರಾಜ್ಯದ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದರು.
ಸರ್ಕಾರದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳಿಗೆ ರಾಜ್ಯಪಾಲರು ಕನ್ನಡಿ ಹಿಡಿದಿದ್ದಾರೆ. ಆದರೆ ಪ್ರತಿ ಪಕ್ಷ ನಾಯಕರಾದ ಆರ್.ಅಶೋಕ್ ಅವರು ರಾಜ್ಯಪಾಲರು ಮಾತಾಡಿದ್ದನ್ನು ಬಿಟ್ಟು ಅವರು ಮಾತಾಡದ್ದನ್ನೆಲ್ಲಾ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಸುಳ್ಳೇ ಆರೋಪ ಮಾಡಿದ್ದಾರೆ.
ನಾವು ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ರಾಜ್ಯಕ್ಕೆ 77 ಸಾವಿರ ಕೋಟಿ ಬಂಡವಾಳ ಹರಿದು ಬಂದಿದೆ. ಬಂಡವಾಳ ಹೂಡಿಕೆಗೂ , ಕಾನೂನು ಸುವ್ಯವಸ್ಥೆಗೂ ನೇರಾ ನೇರ ಸಂಬಂಧ ಇರುತ್ತದೆ. ಸರ್ಕಾರದ ಕಡಿಮೆ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಹೂಡಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದು ವಿವರಿಸಿದರು.
ಉಳಿದಂತೆ ಆರ್.ಅಶೋಕ್ ಅವರ ಆರೋಪ ಮತ್ತು ಸುಳ್ಳುಗಳಿಗೆ ಗೃಹ ಸಚಿವ ಪರಮೇಶ್ವರ್ ಅವರು ಈಗಾಗಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಉಳಿದದ್ದಕ್ಕೂ ಉತ್ತರ ನೀಡುತ್ತಾರೆ ಎಂದರು.
ಬಿಜೆಪಿ ಎಂದರೆ ಸುಳ್ಳು. ಸುಳ್ಳಿನ ಉತ್ಪಾದನೆಯಲ್ಲಿ ಬಿಜೆಪಿ ನಿಸ್ಸೀಮರು. ಅಭಿವೃದ್ಧಿ ಮರೆತು ಸುಳ್ಳುಗಳ ಆಸರೆ ಹೋಗಿದ್ದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದು ರಾಜ್ಯದ ಜನತೆ ಕೊಟ್ಟಿರುವ ಸರ್ಟಿಫಿಕೇಟ್ ಎಂದರು.
BJP ರಾಜ್ಯದಲ್ಲಿ ಇವತ್ತಿನವರೆಗೂ ಸ್ವಂತ ಬಲದಿಂದ ಅಧಿಕಾರಿಕ್ಕೆ ಬಂದೇ ಇಲ್ಲ: ಹಿಂಬಾಗಿಲಲ್ಲಿ ಬಂದಿದ್ದಾರೆ ಅಷ್ಟೆ. ಬಿಜೆಪಿಯಿಂದ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ ಮುಖ್ಯಮಂತ್ರಿ ಆದರು. ಇವರ್ಯಾರೂ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿ ಆದವರಲ್ಲ. ಆಪರೇಷನ್ ಕಮಲ ಮತ್ತು ಹಿಂಬಾಗಿಲ ಮೂಲಕ ಆಮಿಷವೊಡ್ಡಿ ನಮ್ಮ ಶಾಸಕರನ್ನು ಸೆಳೆದು ಅಧಿಕಾರಕ್ಕೇರಿದರು ಎಂದು ಟೀಕಿಸಿ, ಇವತ್ತಿನವರೆಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದ ಉದಾಹರಣೆ ಇದೆಯೇ , ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ನಾವು 2013 ರಲ್ಲಿ 2023 ರಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ. ಜನ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದಾಗಲೂ ತಲೆಬಾಗಿ ಜನರ ತೀರ್ಮಾನವನ್ನು ಒಪ್ಪಿಕೊಂಡು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ನಾವು ಸುಳ್ಳುಗಳ ಆಸರೆಗೆ ಹೋಗಲಿಲ್ಲ ಎಂದರು.
*ಪತ್ರಿಕೆಗಳ ಶ್ಲಾಘನೆಗಳನ್ನು ಪ್ರಸ್ತಾಪಿಸಿದ ಸಿಎಂ*
ರಾಜ್ಯಪಾಲರ ಭಾಷಣ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲ ಕುರಿತಂತೆ ರಾಜ್ಯ ಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳು ಶ್ಲಾಘಿಸಿ ಬರೆದಿರುವುದನ್ನು ಮತ್ತು ಮೆಚ್ಚುಗೆ ಸೂಚಿಸಿರುವುದನ್ನು ಪ್ರಸ್ತಾಪಿಸಿದರು. ಬಳಿಕ ವಿರೋಧ ಪಕ್ಷಗಳು ನಾಡಿನ ಪತ್ರಿಕೆಗಳ ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನಾದರೂ ಓದುವುದನ್ನು ರೂಢಿಸಿಕೊಳ್ಳಬೇಕು, ಏನನ್ನೂ ತಿಳಿದುಕೊಳ್ಳದೆ ಸುಳ್ಳುಗಳನ್ನು ಹೇಳಬಾರದು ಎಂದರು.
*ಸದನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಪರ ವಕಾಲತ್ತು-ಸಿ.ಎಂ.ಸಿದ್ದರಾಮಯ್ಯ ತಿರುಗೇಟು*
*ರಾಜ್ಯದ ಜನರ ಪರ ತಾವು ವಕಾಲತ್ತು ವಹಿಸಿದ್ದನ್ನು ಸದನದಲ್ಲಿ ಬಿಚ್ಚಿಟ್ಟ ಸಿಎಂ*
*ನಾವು ಹಣ ಕೊಡ್ತೀವಿ ಎಂದರೂ ಕೇಂದ್ರ ಅಕ್ಕಿ ಏಕೆ ಕೊಡಲಿಲ್ಲ: ಸದನದಲ್ಲೇ ಬಿಜೆಪಿ ಯನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು*
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಬಿಜೆಪಿ ಪರ ವಕಾಲತ್ತು ವಹಿಸಿದ್ದನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪರವಾಗಿ, ರಾಜ್ಯದ ಜನರ ಪರವಾಗಿ ತಾವು ವಕಾಲತ್ತು ವಹಿಸಿ ಕೇಂದ್ರಕ್ಕೆ ಸರಣಿ ಪತ್ರ ಬರೆದಿರುವುದನ್ನು ವಿವರಿಸಿದರು.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡುವ ವೇಳೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನರ ಪರವಾಗಿ, ರಾಜ್ಯದ ಪಾಲಿನ ಹಕ್ಕನ್ನು ಪಡೆದುಕೊಳ್ಳಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಸದನಕ್ಕೆ ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ ಎಂದರು.
ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಬರೆದೆವು. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, “ನಿಮ್ಮ ಪತ್ರ ತಲುಪಿದೆ” ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ. ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು. ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. ನಮ್ಮ ಪಾಲನ್ನು, ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಇದು ಸಂಘರ್ಷ ಹೇಗಾಗುತ್ತದೆ ಎಂದು ಪ್ರಶ್ನೆಸಿದರು.
ರಾಜ್ಯಕ್ಕೆ ಬರಗಾಲ ಬಂದಾಗ ನರೇಗ ಮಾನವ ದಿನಗಳನ್ನು ನಿಯಮ ಬದ್ದವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? ನಮ್ಮ ರಾಜ್ಯದ, ರಾಜ್ಯದ ಹಕ್ಕನ್ನು ಕೇಳುವುದು ತಪ್ಪಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆಗಳ ಮೂಲಕವೇ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಉತ್ತರಿಸಿದರು.
*ಗ್ಯಾರಂಟಿಗಳ ಲೆಕ್ಕ ಬಿಚ್ಚಿಟ್ಟ ಸಿಎಂ*
ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದನ್ನು ಮುಖ್ಯಮಂತ್ರಿಗಳು ವಿವರಿಸಿದರು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ , ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.
*ನಾವು ಹಣ ಕೊಡ್ತೀವಿ ಎಂದರೂ ಕೇಂದ್ರ ಅಕ್ಕಿ ಏಕೆ ಕೊಡಲಿಲ್ಲ: ಸದನದಲ್ಲೇ ಬಿಜೆಪಿ ಯನ್ನು ಪ್ರಶ್ನಿಸಿದ ಮುಖ್ಯಮಂತದರಿಗಳು*
ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆಜಿಗೆ 34 ರೂಪಾಯಿ ಕೊಡ್ತೀವಿ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಲಿಲ್ಲ. ಈಗ 29 ರೂಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ದರಿದ್ದೇವೆ. ನೀವು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಿ ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.