Join The Telegram | Join The WhatsApp |
ದಾವಣಗೆರೆ, ನವೆಂಬರ್ 23 :
ಮುಂದಿನ ವರ್ಷದೊಳಗೆ ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ದಾವಣಗೆರೆಯ ಹರಿಹರದ ಅಭಿವೃದ್ಧಿ ಡಬಲ್ ಇಂಜಿನ್ ಸರ್ಕಾರವಿರುವ ಕಾರಣ ಸಾಧ್ಯವಾಗುತ್ತದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರಾಗಿದ್ದಾರೆ. ಭಾರತದ ಸಮಗ್ರ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುವ 58 ಲಕ್ಷ ರೈತ ಕುಟುಂಬಗಳಿಗೆ 10000 ರೂ.ಗಳನ್ನು ಕೃಷಿ ಸಮ್ಮಾನ ಯೋಜನೆ ಮೂಲಕ ನೀಡಲಾಗುತ್ತಿದೆ. ಮುದ್ರಾ ಯೋಜನೆಯಡಿ ರಾಜ್ಯದ 19 ಲಕ್ಷ ಯುವಕರ ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ. ಆಯುಷ್ಮಾನ್ ಭಾರತ ಯೋಜನೆಯಡಿ 1 ಕೋಟಿ ಆರೋಗ್ಯ ಕಾರ್ಡ್ ನೀಡಲಾಗಿದೆ. 10 ಲಕ್ಷ ರೈತರ ಮಕ್ಕಳು ಉತ್ತಮ ಶಿಕ್ಷಣ ಹೊಂದಲು ಅನುಕೂಲವಾಗುವಂತೆ ರೈತ ವಿದ್ಯಾನಿಧಿಯನ್ನು ನೀಡಲಾಗುತ್ತಿದೆ. 6 ಲಕ್ಷ ರೈತಕೂಲಿಕಾರರು, ಮೀನುಗಾರರು, ನೇಕಾರರ , ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ ಎಂದರು.
ತಳಸಮುದಾಯದವರ ಏಳಿಗೆ ಸರ್ಕಾರದ ಗುರಿ
ಮಹಿಳಾ ಸಬಲೀಕರಣಕ್ಕೆ ಬದ್ಧರಾಗಿರುವ ನಮ್ಮ ಸರ್ಕಾರ ಸ್ತ್ರೀ ಸಾಮರ್ಥ್ಯ ಯೋಜನೆ ಮತ್ತು ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಎಸ್.ಸಿ. ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳ, 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ ಯೋಜನೆ, ಎಸ್ ಸಿ ಎಸ್ ಟಿ ಸಮುದಾಯದ ಬಡಜನರಿಗೆ 75 ಯೂನಿಟ್ ಉಚಿತ ವಿದ್ಯುತ್,28 ಸಾವಿರ ಕೋಟಿ ಎಸ್ ಸಿ, ಎಸ್ ಟಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ತಳಸಮುದಾಯದವರ ಏಳಿಗೆ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
ನಮ್ಮ ಸರ್ಕಾರ ಕುರಿಗಾಹಿಗಳ ಸಂಘಕ್ಕೆ 20 ಕುರಿ ಮತ್ತು 1 ಮೇಕೆಯನ್ನು ನೀಡುವ ಮೂಲಕ ಕುರಿಗಾಹಿಗಳ ಜೀವನ ಸುಧಾರಣೆಗೆ ಯೋಜನೆ ರೂಪಿಸಲಾಗಿದ್ದು, 354 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಚಾಲನೆ ನೀಡಲಾಗುವುದು. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಹರಿಹರದಲ್ಲಿ ಕ್ಷೇತ್ರವನ್ನು ಕೈಗಾರಿಕೆಗಳನ್ನು ಸ್ಥಾಪಿಸಿ ಕೈಗಾರಿಕಾ ಕ್ಷೇತ್ರವನ್ನಾಗಿ ಮಾಡುವ ಮೂಲಕ ಇಲ್ಲಿನ ಯುವಕರಿಗೆ ಉದ್ಯೋಗವನ್ನು ನೀಡಲಾಗುವುದು. ಹರಿಹರದಲ್ಲಿ ಏತನೀರಾವರಿ ಯೋಜನೆಗೆ ಅನುಮತಿಯನ್ನು ಶೀಘ್ರದಲ್ಲಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಂಸದರಾದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್ ನವೀನ್ ಹಾಗೂ ಮತ್ತಿತರರು ಹಾಜರಿದ್ದರು.
Join The Telegram | Join The WhatsApp |