ಬೆಂಗಳೂರು: ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಶಸ್ವಿಗೊಂಡ ಗುಪ್ತ ಕಾರ್ಯಾಚರಣೆಯಲ್ಲಿ ಮಾಹಿತಿ ನೀಡಿದವರಿಗೆ ಈ ಬಹುಮಾನ ನೀಡಲಾಗುವುದು. ಬಹುಮಾನದ ಮೊತ್ತದಲ್ಲಿ ₹50 ಸಾವಿರವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ, ಇನ್ನುಳಿದ ₹50 ಸಾವಿರ ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿಸಿಪಿಎನ್‌ಡಿಟಿ ಶುಲ್ಕದಿಂದ ಭರಿಸಬೇಕು ಎಂದು ತಿಳಿಸಲಾಗಿದೆ.

2023ರ ಡಿ.11ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮೇಲ್ವಿಚರಣಾ ಮಂಡಳಿ ಸಭೆಯಲ್ಲಿ ಬಹುಮಾನದ ಮೊತ್ತವನ್ನು ಏರಿಸಲು ನಿರ್ಧರಿಸಲಾಗಿತ್ತು ಎಂದು ಹೇಳಲಾಗಿದೆ.