ಬೈಲಹೊಂಗಲ: ಎರಡನೇ ಪತ್ನಿಯ ಮಾತು ಕೇಳಿ ಪತಿ ತನ್ನ ಮೊದಲನೇ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾದ ಘಟನೆ ಸಮೀಪದ ಇಂಚಲ ಗ್ರಾಮದಲ್ಲಿ ಬುಧವಾರ ನಡೆದಿದೆ. ಧಾರವಾಡ ಲಕ್ಷ್ಮಿ ಸಿಂಗ್ ಕೇರಿಯ ಹಾಲಿ ಇಂಚಲ ಗ್ರಾಮದ ಶಮಾ ರಿಯಾಜ ಪಠಾಣ (25) ಕೊಲೆಯಾದ ಮಹಿಳೆ. ಧಾರವಾಡ ಲಕ್ಷ್ಮಿ ಸಿಂಗಕೇರಿಯ ರಿಯಾಜ ಸಾಹೇಬಖಾನ ಶಮಾ ರಿಯಾಜ್ ಪರ್ಜಾನಾ ಪಠಾಣ (30), ಫರ್ಜಾನಾ ರಿಯಾಜ ಪಠಾಣ (28) ಆರೋಪಿಗಳು ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದು ಡಿವೈಎಸ್‌ಪಿ ಚಿದಂಬರ ಇವರ ಮಾರ್ಗದರ್ಶನದಲ್ಲಿ ಪಿಐ ವೀರೇಶ ಮಠಪತಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ರಿಯಾಜ್ ಕಳೆದ ಒಂದು ವರ್ಷದ ಹಿಂದೆ ಫರ್ಜಾನಾಳನ್ನು ಎರಡನೇ ಮದುವೆಯಾಗಿದ್ದ. ಮೊದಲನೇ ಪತ್ನಿ ಶಮಾ ಹಾಗೂ ರಿಯಾಜ್ ನಡುವೆ ವೈಮನಸು ಉಂಟಾಗಿ ಹೊಂದಾಣಿಕೆ ಆಗದ್ದರಿಂದ ಅವಳು ತನ್ನ ತವರುಮನೆ ಇಂಚಲಕ್ಕೆ ಬಂದು ನೆಲೆಸಿದ್ದಳು. ಆರೋಪಿ ರಿಯಾಜ್ ತನ್ನ ಎರಡನೇ ಪತ್ನಿ ಫರ್ಜಾನಾಳನ್ನು ಇಂಚಲ ಗ್ರಾಮಕ್ಕೆ ಕರೆದುಕೊಂಡು ಬಂದು ಇಬ್ಬರನ್ನೂ ಬೇರೆ ಮನೆ ಮಾಡಿಟ್ಟಿದ್ದ. ಮೊದಲ ಪತ್ನಿ ಶಮಾಳನ್ನು ಬಿಟ್ಟು ಬಾ ನಾವಿಬ್ಬರೂ ಧಾರವಾಡಕ್ಕೆ ಹೋಗಿ ಇರೋಣ ಎಂದು ಎರಡನೇ ಪತ್ನಿ ಫರ್ಜಾನಾ ಹೇಳುತ್ತಿದ್ದಳು. ಇದರಿಂದ ಪ್ರೇರಣೆ ಪಡೆದ ರಿಯಾಜ್, ಮೊದಲ ಪತ್ನಿ ಶಮಾಳನ್ನು ಬುಧವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದಾಗ ಮುಖ ಮತ್ತು ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ ಎಂದು ದಾವಲಸಾಬ ಮತ್ತುಮಸಾಬ ಬುಡ್ಡನ್ನವರ ದೂರು ದಾಖಲಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.