ಹೆಬ್ರಿ : ವಿದ್ಯಾರ್ಥಿಗಳಾದ ನೀವೆಲ್ಲರೂ ನಿಮ್ಮ ಜೀವನದಲ್ಲಿ ಏನಾಗಬೇಕು. ಸಾಧನೆಯನ್ನು ಮಾಡಲು ಏನು ಮಾಡಬೇಕು. ಎಂಬುದನ್ನು ಮೊದಲು ನಿರ್ಧಾರ ಮಾಡಬೇಕು. ನೀವು ಏನಾಗಬೇಕೆಂದು ಬಯಸುತ್ತೀರೋ ಅದನ್ನು ದಿನನಿತ್ಯವೂ ಬರೆದು ನಿಮ್ಮ ಮನಸ್ಸಿಗೆ ಮತ್ತೆ ಅದನ್ನು ಸ್ಪಷ್ಟಪಡಿಸಿದಾಗ ನಿಮ್ಮ ಬದುಕಿನಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಆಗ ನಿಮ್ಮ ಬದುಕಿನ ದಾರಿ ಗೋಚರಿಸುತ್ತದೆ. ಬದುಕು ಸ್ಪಷ್ಟಗೊಳ್ಳುತ್ತದೆ. ಎಂದು ಭಾರತೀಯ ಸೇನೆಯ ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಜಗದೀಶ್ ಹೇಳಿದರು.

ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಅವರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್ ನಾಗರಾಜ್ ಶೆಟ್ಟಿ ಮಾತನಾಡಿ, ನಿವೃತ್ತ ಸೈನ್ಯಾಧಿಕಾರಿ ಜಗದೀಶ್ ಅವರು ಹೆಬ್ರಿ ಅಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಸೈನ್ಯಾಧಿಕಾರಿ ಸ್ಥಾನಕ್ಕೆ ಏರಬೇಕಾದರೆ ಅದರ ಹಿಂದಿನ ಶ್ರಮ, ಸಾಧನೆ, ತ್ಯಾಗವನ್ನು ನಾವು ಗಮನಿಸಬೇಕು. ವಿದ್ಯಾರ್ಥಿಗಳೇ ಇಂತಹ ಸಾಧಕರನ್ನು ನಾವು ಮಾರ್ಗದರ್ಶಕರಾಗಿ, ಮಾದರಿಯಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಚಿತ್ರಕಲಾ ಸ್ಪರ್ಧೆಯಲ್ಲಿ ಸಾಧನೆಯನ್ನು ಮಾಡಿ ರಕ್ಷಣಾ ಸಚಿವರಿಂದ ಸನ್ಮಾನವನ್ನು ಸ್ವೀಕರಿಸಿದ ವಿನೀಶ್ ಆಚಾರ್ಯ ಅವರಿಗೆ, ಪ್ರತೀ ವರ್ಷ 50,000/- ರೂಪಾಯಿ ನೆಲೆಯಲ್ಲಿ ಸ್ಕಾಲರ್ಶಿಪ್, ನಗದು ಬಹುಮಾನ ಹಾಗೂ ಎಂಟನೇ ತರಗತಿಯಿಂದ ಪಿಯುಸಿಯವರೆಗೆ ಉಚಿತ ಶಿಕ್ಷಣವನ್ನು ನೀಡುವುದಾಗಿ ಘೋಷಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಹೊರಹೊಮ್ಮುವುದೇ ಸಾಧನೆ. ಸಾಧನೆಗೆ ಪೋಷಕರ, ಶಿಕ್ಷಣ ಸಂಸ್ಥೆಯ ಎಲ್ಲರ ಸಹಕಾರ ಅಗತ್ಯ. ಸಾಧನೆ ಮಾಡುತ್ತಾ ಹೋದಂತೆ ನಾವು ಯಾವುದೇ ಕಾರಣಕ್ಕೆ ಬೀಗಬಾರದು, ತಗ್ಗಿ ಬಗ್ಗಿ, ಸಮಚಿತ್ತದಲ್ಲಿದಷ್ಟು ಮತ್ತೂ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಇದಕ್ಕೆ ವಿನೀಶ್ ಆಚಾರ್ಯ ಮಾಡಿದ ಸಾಧನೆಯೇ ಸಾಕ್ಷಿ. ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಮತ್ತು ಕೇಂದ್ರ ರಕ್ಷಣಾ ಸಚಿವಾಲಯ(ಎಂಓಡಿ) ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ(ಎಂಇಒ)ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ ವೀರ್ ಗಾಥಾ 4.0 ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ರಕ್ಷಣಾ ಸಚಿವರಿಂದ ಗೌರವವನ್ನು ಸ್ವೀಕರಿಸಿದ ಎಸ್ ಆರ್ ಪಬ್ಲಿಕ್ ಸ್ಕೂಲ್ 7ನೇ ತರಗತಿ ವಿದ್ಯಾರ್ಥಿ ವಿನೀಶ್ ಆಚಾರ್ಯ ಹಾಗು ಅವರ ಪೋಷಕರಾದ ಪ್ರಕಾಶ್ ಆಚಾರ್ಯ ಹಾಗು ವಿನಯ ಅವರನ್ನು ಗೌರವಿಸಲಾಯಿತು.

ಎಸ್.ಆರ್. ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಎಸ್.ಆರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಾಚಾರ್ಯ ಉಪಸ್ಥಿತರಿದ್ದರು.

ಸಂಸ್ಕೃತ ಉಪನ್ಯಾಸಕ ಆದಿತ್ಯ ನಿರೂಪಿಸಿದರು. ದೀಪಕ್ ಎನ್ ಸ್ವಾಗತಿಸಿದರು. ಭಗವತಿ ವಂದಿಸಿದರು.