ಹೆಬ್ರಿ: ತಂದೆ ತಾಯಿ, ಗುರುಗಳು ಮತ್ತು ನಂಬಿದ ದೈವ- ದೇವರುಗಳ ಆಶೀರ್ವಾದದಿಂದ ನಾವು ಸಫಲತೆಯನ್ನು ಪಡೆಯಬಹುದು, ಅಲ್ಲದೆ ನಮ್ಮಲ್ಲಿ ಕಲಿಯುವ ಹಂಬಲ ದೃಢವಾಗಿದ್ದರೆ ನಾವು ನಮ್ಮ ಕ್ಷೇತ್ರದಲ್ಲಿ ಉತ್ತುಂಗಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಕಾಂತಾರ ಚಲನಚಿತ್ರ ಖ್ಯಾತಿಯ ಸಹ ನಟ ಸತೀಶ್ ಆಚಾರ್ಯ ಪೆರ್ಡೂರು ಹೇಳಿದರು.

ಎಸ್ ಆರ್ ಪದವಿಪೂರ್ವ ಕಾಲೇಜಿನಲ್ಲಿ ಅನ್ವೇಷಣಂ- 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಗ್ಯಾರಂಟಿ ನ್ಯೂಸ್ ಚಾನೆಲ್ ನಿರ್ದೇಶಕಿ ಮತ್ತು ಪ್ರಧಾನ ಸಂಪಾದಕಿ ಶ್ರೀಮತಿ ರಾಧಾ ಹಿರೇಗೌಡರ್ ಭಾಗವಹಿಸಿ ತಮ್ಮ ಜೀವನ ನಡೆದು ಬಂದ ಬಗೆ ಮತ್ತು ತಮ್ಮ ಜೀವನದ ಯಶೋಗಾಥೆ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ವಿದ್ಯಾರ್ಥಿ ದೆಸೆಯಲ್ಲಿ ಸಾಧಿಸುವ ಮನಸ್ಸು ಮತ್ತು ಛಲವಿದ್ದರೆ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಜೀವನವನ್ನು ನಿರೂಪಿಸಬಹುದೆಂದು, ತಮ್ಮ ವೃತ್ತಿ ಜೀವನದ ಕೆಲವು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನು ಹೇಳಿದರು. ಅನ್ವೇಷಣಂ- 2024 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೆಬ್ರಿ ಜೆಸಿಐ ಅಧ್ಯಕ್ಷೆ ರಕ್ಷಿತಾ ಪಿ ಭಟ್ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಓದುವ ಕಡೆ ಗಮನ ನೀಡುವಂತೆ ಸಲಹೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಚ್ ನಾಗರಾಜ್ ಶೆಟ್ಟಿ ವಹಿಸಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ, ಅದನ್ನು ಪ್ರದರ್ಶಿಸಲು ಈ ತರದ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ ಆರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎಚ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್ ನಿರೂಪಿಸಿ, ಹಿಂದಿ ಉಪನ್ಯಾಸಕಿ ವನಿತಾ ತೋಳಾರ್ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಅಮೃತ್ ವಂದಿಸಿದರು.