ಹೆಬ್ರಿ : ದಿನಾಂಕ 30-3-2025 ರಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಆಶ್ರಯದಲ್ಲಿ ಹೆಬ್ರಿಯ ತಾಲೂಕಿನ ಪಶ್ಚಿಮ ಘಟ್ಟದ ಬೆಟ್ಟದಲ್ಲಿರುವ ಪ್ರಾಚೀನ ಅನ್ನಪೂಣೇಶ್ವರಿ ದೇವಾಲಯ ಶ್ರೀ ಕ್ಷೇತ್ರ ದುರ್ಗಕ್ಕೆ ಚಾರಣ ಮತ್ತು ದುರ್ಗದಲ್ಲೊಂದು ಆಶು ಕವನ ಗೋಷ್ಠಿ ಎಂಬ ಕಾರ್ಯಕ್ರಮವು ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸತೀಶ ಬಾಯರಿ ಶ್ರೀಕ್ಷೇತ್ರ ದುರ್ಗ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ರಾಧಾಕೃಷ್ಣ ರಾವ್, ಹೆಬ್ರಿ ತಾ| ಐದನೆಯ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿದ್ದ ಗಣೇಶ ಹಾಂಡ, ಆಶುಕವನ ಗೋಷ್ಠಿಯ ಸಮನ್ವಯಕಾರ ಮಂಜುನಾಥ ಕೆ.ಶಿವಪುರ ಉಪಸ್ಥಿತರಿದ್ದರು.

ಆಶುಕವನ ಗೋಷ್ಠಿಯಲ್ಲಿ ಕವಿಗಳಾದ ಮಹೇಶ ಹೈಕಾಡಿ, ಶೋಭಾ ಆರ್ ಕಲ್ಕೂರ್, ನವೀನ ಶೆಟ್ಟಿ ಮಡಾಮಕ್ಕಿ, ಬಾಲಚಂದ್ರ ಸುಬ್ಬಣ್ಣ ಕಟ್ಟೆ, ಬಾಲಚಂದ್ರ ಹೆಬ್ಬಾರ್, ಪುಪ್ಪಾವತಿ ಹೆಬ್ರಿ, ಸುಮಂಗಲಾ ಭಟ್ ಶ್ರೀಜನ್ ವಿದ್ಯಾಜನಾರ್ದನ್ ಭಾಗವಹಿಸಿ ಆಶುಕವನಗಳನ್ನು ಪ್ರಸ್ತುತಪಡಿಸಿದರು.

ಶಿಕ್ಷಕಿ ರತ್ನಾವತಿ ಪ್ರಾರ್ಥಿಸಿದರು. ಮಹೇಶ ಹೈಕಾಡಿ ಸ್ವಾಗತಿಸಿ, ಹೆಚ್ ಜನಾರ್ದನ ಧನ್ಯವಾದವಿತ್ತರು.

ಶ್ರೀ ಕ್ಷೇತ್ರ ದುರ್ಗದ ಸತೀಶ ಬಾಯರಿಯವರು ಮಾತನಾಡಿ ಹೆಬ್ರಿ ತಾಲೂಕಿನ ಪ್ರಾಚೀನ ದೇವಾಲಯ ಇದಾಗಿದ್ದು, ಇಲ್ಲಿ ಚಾರಣ ಕಾರ್ಯಕ್ರಮದೊಂದಿಗೆ ಆಶು ಕವನ ಗೋಷ್ಠಿ ಕಾರ್ಯಕ್ರಮದ ಪರಿಕಲ್ಪನೆಯ ಮೂಲಕ ಸಾಹಿತ್ಯದ ಸೊಗಸನ್ನು ಹೆಚ್ಚಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಶ್ರೀನಿವಾಸ ಭಂಡಾರಿಯವರು ಮಾತನಾಡಿ ಹಳ್ಳಿಹಳ್ಳಿ ಬೆಟ್ಟಗುಡ್ಡ ದುರ್ಗಗಳಲ್ಲಿಯೂ ಇಂತಹ ಕಾರ್ಯಕ್ರಮದ ಮೂಲಕ ಅಲ್ಲಿಯ ಜನಪದರನ್ನು ಸಾಹಿತ್ಯದೆಡೆಗೆ ಸೆಳೆಯುವ ಉದ್ದೇಶವನ್ನು ಹೊಂದಿದೆ. ಚಾರಣವನ್ನು ಸಾಹಿತ್ಯ ಪ್ರೇರಣೆಗೆ ಬಳಸಿಕೊಳ್ಳುವ ಮೂಲಕ ಸಾಹಿತ್ಯ ಪರಿಪತ್ತು ತನ್ನದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂದರು

ಗೋಷ್ಠಿಯ ಸಮನ್ವಯ ಕಾರರಾದ ಮಂಜುನಾಥ ಕೆ.ಶಿವಪುರ ಅವರು ‘ಮನದ ಭಾವ ಜೀವವಾಗಿ ಕವನವಾಗಿ ಸದ್ಯ ಸ್ಪೂರ್ತಿಯಿಂದ ರಚಿಸಲ್ಪಡುವುದೇ ಆಶುಕವನ. ಬರೆವಣಿಗೆ ಇಲ್ಲದ ಕಾಲದಲ್ಲಿ ಆಶು ಕವಿತೆಗಳೇ ಪ್ರಧಾನವಾಗಿದ್ದವು. ಗಾದೆ ಒಗಟು, ಜನಪದ ಸಾಹಿತ್ಯಗಳೂ ಆಶು ರಚನೆಗಳೇ ಆಗಿದೆ. ಆಧುನಿಕ ಯುಗದಲ್ಲಿ ಆಶು ಕವಿತೆಗಳ ಸಂಖ್ಯೆ ಕಡಿಮೆಯಾಗಿವೆ. ಆಶು ಕವಿತೆಗಳು ಭಾವ, ಪಾಂಡಿತ್ಯ, ಸಮಯ ಸ್ಪೂರ್ತಿ, ಭಾಷಾ ಹಿಡಿತ ಉತ್ತಮವಿದ್ದಾಗ ಸ್ವಯಂ ಸ್ಪೂರ್ತಿಯಿಂದ ಹೊರ ಹೊಮ್ಮುತ್ತವೆ. ಕೇಳಲು ಮತ್ತು ಹೇಳಲು ಹಿತವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಅಭಿಮಾನಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.