ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪುಣೆಯ ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ಕೂಡಲೇ ನಗರದ ವಸತಿ ಉಪನಗರವಾದ ಬವ್‌ಧಾನ್‌ ಗುಡ್ಡಗಾಡು ಪ್ರದೇಶದ ಬಳಿ ಇಂದು, ಬುಧವಾರ ಬೆಳಿಗ್ಗೆ 6:45 ರ ಸುಮಾರಿಗೆ ಪತನಗೊಂಡಿದೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್‌ ಮುಂಬೈನ ಜುಹುಗೆ ತೆರಳುತ್ತಿತ್ತು. ಹೆಲಿಕಾಪ್ಟರ್ ದೆಹಲಿ ಮೂಲದ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದೆ ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ ಮೃತರಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಓರ್ವ ಎಂಜಿನಿಯರ್ ಇದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸಿದೆ. ಎರಡು ಆಂಬ್ಯುಲೆನ್ಸ್‌ಗಳು ಮತ್ತು ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿದ್ದವೆ ಎಂದು ವರದಿಯೊಂದು ತಿಳಿಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರ್ ವಿನಯಕುಮಾರ ಚೌಬೆ ಅವರು, ಹೆಲಿಕಾಪ್ಟರ್ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ದಳದ ವಾಹನಗಳೊಂದಿಗೆ ನಮ್ಮ ತಂಡಗಳು ಸ್ಥಳಕ್ಕೆ ತಲುಪಿವೆ. ಅಪಘಾತದ ನಂತರ ಚಾಪರ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಕಳೆದ ತಿಂಗಳು, ಖಾಸಗಿ ಹೆಲಿಕಾಪ್ಟರ್ ಮುಂಬೈನ ಜುಹುದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಪುಣೆಯ ಪೌಡ್ ಗ್ರಾಮದ ಬಳಿ ಪತನಗೊಂಡು ನಾಲ್ವರು ಗಾಯಗೊಂಡಿದ್ದರು.