ಉಪನ್ಯಾಸಕ ವೃತ್ತಿ ಬಿಟ್ಟು ಈ ಅಕ್ಟೋಬರಿಗೆ 20 ತಿಂಗಳಾದವು. ಈ ಅವಧಿಯಲ್ಲಿ ನಾವು ಪಡೆದುಕೊಂಡದ್ದು ಎರಡು ಲಕ್ಷದ ಹತ್ತು ಸಾವಿರ ಮನಸ್ಸುಗಳನ್ನು. ನಾನು ಕಾಲೇಜು ಬಿಡುವಾಗ ಈ ಪೇಜಿಗೆ ಇದ್ದದ್ದು ಕೇವಲ ಹತ್ತು ಸಾವಿರ ಫಾಲೋವರ್ಸ್. ಆ ಮೇಲೆ ಎರಡು ಲಕ್ಷ ಜನ ಆಗಿದ್ದು ನಿಜಕ್ಕೂ ಮ್ಯಾಜಿಕ್ಕು.

ಕ್ರಿಯೇಟಿವ್ ಎಡಿಟಿಂಗ್ ಇಲ್ಲ. ಮ್ಯೂಸಿಕ್ ಇಲ್ಲ. ಡ್ರೋನ್ ಶಾಟ್, ಕ್ಯಾಮರಾ ವಿಶುವಲ್ಸ್ ಇಲ್ಲದೆ ಕೇವಲ ಮೊಬೈಲಲ್ಲೇ ತೆಗೆದ ವೀಡಿಯೋಗಳಿಗೆ ನೀವು ನೀಡಿದ ಬೆಂಬಲ ಅದ್ಭುತವಾದುದು. ಆರಂಭದಲ್ಲಿ ನಾನು ಮೈಕ್ ಬಳಸುತ್ತಿರಲಿಲ್ಲ. ಸುತ್ತಮುತ್ತಲಿನ ಸದ್ದುಗಳಿಂದ ಕರ್ಕಶತೆ ಇದ್ದರೂ ಅದೆಲ್ಲವನ್ನೂ ಬದಿಗೊತ್ತಿ ವಿಷಯವನ್ನು ಇಷ್ಟಪಟ್ಟು ನಮ್ಮ ಜೊತೆಗಿದ್ದು ಬೆಳೆಸಿದಿರಿ. ನಿಮಗೆ ಮೊದಲ ಧನ್ಯವಾದಗಳು. ಹೊಸತಾಗಿ ಪೇಜೋ, ಚ್ಯಾನಲ್ಲೋ ಮಾಡುವವರಿಂದಲೂ ನಾವು ಕಲಿಯತ್ತಿದ್ದೇವೆ. ಉಡುಪಿಯ ಹೆಸರಲ್ಲೇ ತುಂಬಾ ಜನ ಕಂಟೆಂಟು ಮಾಡುತ್ತಿದ್ದಾರೆ. ಅವರೆಲ್ಲರಿಂದಲೂ ಸ್ಪೂರ್ತಿ ಪಡೆಯುತ್ತಿದ್ದೇವೆ. ಎಲ್ಲರೂ ಜೊತೆ ಜೊತೆಗೇ ಬೆಳೆಯೋಣ.

ನಾನೀಗ ಎಲ್ಲೇ ಹೋದರು ಗುರುತಿಸಿ ಪ್ರೀತಿಯಿಂದ ಮಾತನಾಡುವ, ಹಾರೈಸುವ ಜನ ಸಿಕ್ಕಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನ ಸುತ್ತಾಡ್ತಿದ್ದೆನಲ್ಲ, ನಾನು ಎಲ್ಲೂ ಏನನ್ನೂ ನಿರೀಕ್ಷಿಸಲೇ ಇಲ್ಲ. ಆದ್ರೆ ಕೆಮ್ಮಣ್ಣಿಗೆ ಕುಟುಂಬ ಸಮೇತ ಹೋಗಿದ್ದೆ. ಆ ಹಳ್ಳಿಯ ಎಲ್ಲರೂ ಮಾತಾಡಿಸುವವರೇ. ಊಟ ಮಾಡಿ ವಾಪಾಸ್ ಬರುವಾಗ ಅಲ್ಲಿನ ಭಟ್ರು ದೇವರಿಗೆ ಉಡಿಸಿದ ಸೀರೆಯೊಂದನ್ನು ಕೊಟ್ಟು ಆಶೀರ್ವಾದ ಮಾಡಿದ್ದರು. ಅದನ್ನು ಕಂಡು ನನ್ನ ಅಮ್ಮನಿಗಾದ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಉಡುಪಿಯ ಕಂಡೀರಾದ ವ್ಯಾಪ್ತಿ ಪ್ರೀತಿ ಅರ್ಥವಾಗಿತ್ತು. ಶ್ರೀಮಂತ, ಬಡವರೆಂದಿಲ್ಲ. ಹಳ್ಳಿ ಪೇಟೆ ಎಂದಿಲ್ಲ. ಎಲ್ಲರೂ ನಮ್ಮನ್ನು ಸಮಾನವಾಗಿ ಪ್ರೋತ್ಸಾಹಿಸಿದರು. ವೈದ್ಯರಿಂದ ಹಿಡಿದು ಕ್ಲೀನಿಂಗ್ ಕೆಲಸ ಮಾಡುವ ಅಕ್ಕಂದಿರೂ, ಸೆಕ್ಯುರಿಟಿ ಗಾರ್ಡುಗಳೂ ನಿಮ್ಮ ವೀಡಿಯೋ ನೋಡ್ತಿದ್ದೇವೆ ಅಂದಾಗ ನಿಜಕ್ಕೂ ತೃಪ್ತಿ.

ಸ್ವತಂತ್ರವಾಗಿಯೇ ಬದುಕು ಕಾಣಬೇಕೆಂದಿದ್ದ ನನಗೆ ಉಡುಪಿಯ ಕಂಡೀರಾ ಬಹುದೊಡ್ಡ ವೇದಿಕೆಯನ್ನು ಒದಗಿಸಿದೆ. ಆದರೀಗ ನಾನು ಒಂದು ಉದ್ಯೋಗಕ್ಕೆ ಸೇರಿದ್ದೇನೆ. ನಾನು ಆದರ್ಶ ಎಂದು ಪೂಜಿಸುತ್ತಿದ್ದವರಿಂದಲೇ ಬಂದ ಅವಕಾಶವಿದು. ಅದರ ಬಗ್ಗೆ ಮುಂದೊಂದು ವೀಡಿಯೋದೊಂದಿಗೆ ಹೇಳುತ್ತೇನೆ. ಆ ಜವಾಬ್ದಾರಿಯೊಂದಿಗೆ ಉಡುಪಿಯ ಕಂಡೀರಾವನ್ನೂ ಯಥಾ ಪ್ರಕಾರ ನಡೆಸಲು ಪ್ರಯತ್ನಿಸುತ್ತೇನೆ. ಸ್ವಲ್ಪ ವ್ಯತ್ಯಾಸವಾದರೂ ನಮ್ಮನ್ನು ಮರೆಯದೆ ಜೊತೆಗಿರಿ.

ಇಪ್ಪತ್ತು ತಿಂಗಳಲ್ಲಿ ಕಲಿತ ಪಾಠಗಳು, ಅನುಭವಗಳು, ಜನರ ಪ್ರೀತಿ, ಕನಸುಗಳನ್ನೆಲ್ಲ ಸ್ವಲ್ಪ ಸ್ವಲ್ಪವೇ ಬರೆದಿಡುತ್ತಾ ಬಂದಿದ್ದೇನೆ. ಶೀಘ್ರದಲ್ಲೇ ಅದನ್ನು ಪುಸ್ತಕವಾಗಿಸುವ ಬಯಕೆ ಇದೆ. ಯಾವತ್ತೂ ಸುತ್ತಾಟವನ್ನೇ ಬಯಸುವ ಕಾರಣದಿಂದ ಅದಕ್ಕಾಗಿಯೇ ಸಮಯ ನೀಡದೆ ಸ್ವಲ್ಪ ವಿಳಂಬವಾದರೂ ಆದಷ್ಟು ಬೇಗ ಮುದ್ರಿಸುತ್ತೇನೆ. ನೀವೆಲ್ಲರೂ ಆ ಪುಸ್ತಕ ಕೊಂಡು ಓದಬೇಕು. ಆ ಪುಸ್ತಕದ ಮೂಲಕ ನಾನು ನಿಮ್ಮ ಮನೆಯಲ್ಲಿ, ಮನಸಲ್ಲಿ ಇರಬೇಕೆಂದು ಆಸೆ.

*ನಮಸ್ಕಾರ ನಾನು ಮಂಜುನಾಥ ಕಾಮತ್.