ಮಂಗಳೂರು : ಮಂಗಳೂರು ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆಗಬೇಕೆನ್ನುವುದು ದಶಕಗಳ ಬೇಡಿಕೆಯಾಗಿದೆ.

ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕೇವಲ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಒಟ್ಟು ಆರು ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದರ ಜೊತೆ ಅಕ್ಕಪಕ್ಕದ ಜಿಲ್ಲೆಯವರು ಮಂಗಳೂರಿಗೆ ಬರಲು ಸಾಕಷ್ಟು ಅಗತ್ಯ ಸೌಕರ್ಯಗಳೂ ಸಹ ಇವೆ. ಸದ್ಯ ಹೈಕೋರ್ಟ್‌ನ ಪ್ರಕರಣಕ್ಕಾಗಿ ಈ ಭಾಗದ ಜನ ದೂರದ ಬೆಂಗಳೂರಿಗೆ ತೆರಳಬೇಕಾಗಿದೆ. ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಅವರು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ರಾಜ್ಯ ಸರಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಮೇಲಿಂದ ಮೇಲೆ ವಕೀಲರ ಸಂಘದ ಸಭೆ ನಡೆಸಿ ಪೀಠದ ಅನಿವಾರ್ಯತೆ ಮನವರಿಕೆ ಮಾಡುತ್ತಿದ್ದಾರೆ. ಆದರೆ ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಸರಕಾರ ಸದ್ಯಕ್ಕೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಸಂಬಂಧಿಸಿದೆ ಜಿಲ್ಲೆಗಳ ಪಾಲಿಗೆ ತೀವ್ರ ನಿರಾಶೆಗೆ ಕಾರಣವಾಗಿದೆ. ಸರ್ಕಾರದ ನಿರಾಸಕ್ತಿ ಜನತೆ ಹಾಗೂ ವಕೀಲರ ಹತಾಶೆಗೆ ಕಾರಣವಾಗಿದೆ.