ಹೆಬ್ರಿ : ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನದಿಂದ ಉಡುಪಿ ಕೃಷ್ಣ ಮಠಕ್ಕೆ ಧರ್ಮ ಜಾಗೃತಿ, ದೇವರ ಅನುಗ್ರಹ, ಉತ್ತಮ ಆರೋಗ್ಯ, ಲೋಕ ಕಲ್ಯಾಣಕ್ಕಾಗಿ 14ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಯಾತ್ರಿಕರು ಹಾದಿಯಲ್ಲಿ ದೇವರ ನಾಮಾವಳಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತ ತೆರಳಿದರು. ಪಾಡಿಗಾರ ವಡ್ಡಮೇಶ್ವರ ಮಠದ ಬೆಣ್ಣೆ ಕೃಷ್ಣದೇವರು, ಪೆರ್ಡೂರು ಅನಂತಪದ್ಮನಾಭ ದೇವರ ದರ್ಶನ ಮಾಡಿ, ಹಿರಿಯಡ್ಕ ಪುತ್ತಿಗೆ ಮಠಕ್ಕೆ ತೆರಳಿ ಸುವರ್ಣ ನದಿಯಲ್ಲಿ ತೀರ್ಥ ಸ್ಥಾನಗೈದು ವಿಠಲ ದೇವರ ದರ್ಶನ ಮಾಡಿ ಮಹಾಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಉಡುಪಿಗೆ ತೆರಳಿ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣದೇವರ ದರ್ಶನ, ಚಂದ್ರಮೌಳೇಶ್ವರ, ಅನಂತೇಶ್ವರ ದೇವರ ದರ್ಶನಗೈದು ಮಧ್ವ ಸರೋವರಕ್ಕೆ ತೆರಳಿ ತೀರ್ಥ ಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಿದರು. ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನಗೈದು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.