ಮಂಗಳೂರು: ಗುರುವಾರ ನಡೆದ ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿ, ಅವರ ಹಿನ್ನೆಲೆ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅವರ ಹಿನ್ನೆಲೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಅಬ್ದುಲ್ ಸಪ್ವಾನ್, ನಿಯಾಜ್, ಮಹಮ್ಮದ್ ಮುಜಾಬಿಲ್,
ಕಲಂದರ್ ಶಾಫಿ, ರಿಜ್ವಾನ್, ಆದಿಲ್ ಮೆಹರೂಬಿ, ರಂಜಿತ್ ಕಳಸ, ನಾಗರಾಜ್ ಕಳಸ ಬಂಧಿತರು.
ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಎಂಟು ಜನ ಮತ್ತು ಇತ್ತೀಚಿಗೆ ಕುಡುಪು ಬಳಿ ಆಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಪ್ಪತ್ತೊಂದು ಜನರ ಬಂಧನವಾಗಿದೆ. ಜಿಲ್ಲೆಯಲ್ಲಿ ಶಾಂತಿ ಕದಡಲು ಬಿಡುವುದಿಲ್ಲ. ಯಾವ ಸಮುದಾಯಕ್ಕೂ ಕಾನೂನು ಉಲ್ಲಂಘನೆ ಮಾಡಲು ಆಸ್ಪದ ನೀಡುವುದಿಲ್ಲ. ಈ ಭಾಗ ಶಾಂತಿಯಿಂದ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.

ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಒಂದು ಪಕ್ಷಕ್ಕೆ ಸೇರಿದವರು ರೌಡಿಶೀಟರ್ ನನ್ನು ಹೀರೊ ಮಾಡಿದ್ದಾರೆ. ಯಾವುದೋ ಕಾರಣಕ್ಕೆ ಅವರೆಲ್ಲ ಬಂದು ಹೋಗಿದ್ದಾರೆ. ಆದರೆ ಸರಕಾರ ಅಥವಾ ನಾವು ಆ ರೀತಿ ಮಾಡಿಲ್ಲ. ಕೊಲೆಯಾದವನ ಹೆಸರಲ್ಲಿ ಎರಡು ಕೊಲೆ ಸೇರಿ 5 ಕೇಸ್ ಇದೆ ಎಂದು ಹೇಳಿದರು.

ಕೋಮುಗಲಭೆ ತಡೆಯಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ನಿಗ್ರಹ ಕಾರ್ಯ ಪಡೆ ರಚಿಸಲಾಗುತ್ತದೆ. ಎರಡು ಜಿಲ್ಲೆಗೆ ಇದು ಸೀಮಿತವಾಗಿದ್ದು ಆಂಟಿ ನಕ್ಸಲ್ ಫೋರ್ಸ್ ನಂತೆ ಕೆಲಸ ಮಾಡುತ್ತದೆ. ಪೊಲೀಸರೊಂದಿಗೆ ಸಮನ್ವಯತೆಯಿಂದ ಇದು ಕೆಲಸ ಮಾಡಲಿದೆ ಎಂದು ತಿಳಿಸಿದರು.

ಪ್ರಕರಣದ ಮಾಹಿತಿ ನೀಡಿದ ಕಮಿಷನರ್

ಆರೋಪಿಗಳ ವಿವರ ನೀಡಿದ ಪೊಲೀಸ್‌ ಕಮಿಷನ‌ರ್ ಅನುಪಮ್ ಅಗ್ರವಾಲ್ ‘ಕಿನ್ನಿಪದವಿನಲ್ಲಿ ಮೇ 1 ರಂದು ರಾತ್ರಿ ಸುಹಾಸ್‌ ಶೆಟ್ಟಿ ಕೊಲೆ ನಡೆದಿತ್ತು. ಪ್ರಕರಣದ ಆರೋಪಿಗಳನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್‌ ಕಸ್ಟಡಿಗೆ ಪಡೆಯುತ್ತೇವೆ. ಅವರ ವಿಚಾರಣೆ ಬಳಿಕ ಹತ್ಯೆಯ ಸಮಗ್ರ ವಿವರ ಸಿಗಲಿದೆ ಎಂದರು.

ಕಿನ್ನಿಪದವಿನಲ್ಲಿ ವಾಸವಾಗಿರುವ ಪೇಜಾವರ ಗ್ರಾಮದ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ ( 29), ಶಾಂತಿಗುಡ್ಡೆಯ ನಿಯಾಜ್ (28), ಕೆಂಜಾರು ಗ್ರಾಮದ ಮೊಹಮ್ಮದ್ ಮುಝಮಿಲ್ (32), ಕಳವಾರು ಕುರ್ಸುಗುಡ್ಡೆಯ ಕಲಂದ‌ರ್ ಶಾಫಿ (31), ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರುದ್ರಪಾದೆಯ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಹಾಗೂ ಕಾಟಿಪಳ್ಳ ಮಂಗಳಪೇಟೆಯ ಅದಿಲ್ ಮೆಹರೂಫ್ ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಸಫ್ವಾನ್ ಮೇಲೆ 2023 ರಲ್ಲಿ ಸುರತ್ಕಲ್‌ನಲ್ಲಿ ಸುಹಾಸ್‌ ಶೆಟ್ಟಿ ಸಹಚರ ಪ್ರಶಾಂತ್ ಹಾಗೂ ಧನರಾಜ್ ಮತ್ತಿತರರು ಹಲ್ಲೆ ನಡೆಸಿದ್ದರು. ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಸಫ್ವಾನ್ ಗೆ ಇತ್ತು. ಆತ 2022ರಲ್ಲಿ ಸುರತ್ಕಲ್‌ನಲ್ಲಿ ಕೊಲೆಯಾಗಿದ್ದ ಮಹಮ್ಮದ್ ಫಾಝಿಲ್ ಸೋದರ ಆದಿಲ್‌ನನ್ನು ಈಚೆಗೆ ಸಂಪರ್ಕಿಸಿದ್ದ. ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್‌ ಶೆಟ್ಟಿ ಕೊಲೆ ಸಲುವಾಗಿ ಆದಿಲ್ 5 ಲಕ್ಷ ನೀಡಲು ಒಪ್ಪಿದ್ದ, ರೂ. 3 ಲಕ್ಷ ನೀಡಿದ್ದ ಎಂದರು.

ನಿಯಾಜ್ ನ ಇಬ್ಬರು ಸ್ನೇಹಿತರಾದ, ಕಳಸ ಮೂಲದ ಶಾಮಿಯಾನ ಕೆಲಸ ಮಾಡುವ ನಾಗರಾಜ್ ಮತ್ತು ಡ್ರೈವಿಂಗ್ ವೃತ್ತಿಯಲ್ಲಿರುವ ರಂಜಿತ್ ನನ್ನು ಸಂಪರ್ಕಿಸಿದ್ದು, ಈ ಇಬ್ಬರು ಎರಡು ದಿನಗಳಿಂದ ಸಫ್ವಾನ್ ಮನೆಯಲ್ಲಿ ವಾಸವಾಗಿದ್ದರು. ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.