ಮಂಗಳೂರು: ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಹಿಂದೂ ನಾಯಕ ಸುಹಾಸ್ ಶೆಟ್ಟಿ ಅವರ ಮೃತದೇಹ ಎ.ಜೆ.ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರ ಹೊರತಾಗಿಯೂ ಮೃತದೇಹವನ್ನು ಅವರ ಊರಾದ ಕಾರಿಂಜಕ್ಕೆ ಮೆರವಣಿಗೆಯಲ್ಲಿ ಒಯ್ಯಲು ಹಿಂದು ಸಂಘಟನೆಗಳ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ವಾಹನವನ್ನು ಹೂವುಗಳಿಂದ ಅಲಂಕರಿಸಿ ಸಜ್ಜುಗೊಳಿಸಲಾಗಿದೆ.

ಆಸ್ಪತ್ರೆಗೆ ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ ಹಾಗೂ ರಾಜೇಶ್ ನಾಯ್ಕ ಉಳೇಪಾಡಿ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ನಗರ ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್‌ವಾಲ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 5ರವರೆಗೆ ನಿಷೇಧಾಜ್ಞೆ : ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೀಮಿತವಾಗಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮೇ 5 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಆದೇಶ ಹೊರಡಿಸಿದ್ದಾರೆ.

ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ನಗರದಲ್ಲಿ ಹೋಟೆಲ್‌ಗಳೂ ಬಾಗಿಲು ಹಾಕಿವೆ. ಕೆಲ ಹೋಟೆಲ್‌ಗಳು ಅರ್ಧಬಾಗಿಲು ತೆರೆದು ವ್ಯಾಪಾರ ನಡೆಸುತ್ತಿವೆ.