ಬೆಂಗಳೂರು : ಬೆಂಗಳೂರಿನ ನಮ್ರತಾ ಎಸ್. ಹೊಸಮಠ ಎಂಬ ಯುವತಿ 24 ವರ್ಷದಲ್ಲೇ ಜಡ್ಜ್ ಪರೀಕ್ಷೆ ಪಾಸ್ ಮಾಡಿದ್ದು, ರಾಜ್ಯದ ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಕರ್ನಾಟಕ ಸಿವಿಲ್ ಜಡ್ಜ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರಾಜ್ಯದ ವಿವಿಧೆಡೆಯ 33 ಮಂದಿ ಜಡ್ಜ್ ಹುದ್ದೆಗೆ ನೇಮಕ ಆಗಿರುವ ಬಗ್ಗೆ ಫೆ.23ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇವರ ಪೈಕಿ ಮಂಗಳೂರಿನ ಅನಿಲ್ ಜಾನ್ ಸಿಕ್ವೆರಾ 25 ರ ಹರೆಯದಲ್ಲೇ ಜಡ್ಜ್ ಹುದ್ದೆಗೇರಿದ ಕರ್ನಾಟಕದ ಅತಿ ಕಿರಿಯ ವ್ಯಕ್ತಿಯೆಂದು ಹೇಳಲಾಗಿತ್ತು. ಆದರೆ, ಅದೇ ಪಟ್ಟಿಯಲ್ಲಿರುವ ಬೆಂಗಳೂರಿನ ನಮ್ರತಾ ಎಸ್. ಹೊಸಮಠ ಎಂಬ ಯುವತಿ 24 ವರ್ಷದಲ್ಲೇ ಜಡ್ಜ್ ಪರೀಕ್ಷೆ ಪಾಸ್ ಮಾಡಿದ್ದು, ರಾಜ್ಯದ ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಶ್ರೀರಾಮಪುರದ ನಿವಾಸಿ ವಕೀಲ ಸ್ವಾಮಿ ಶಿವಪ್ರಕಾಶ್ ಅವರ ಪುತ್ರಿಯಾಗಿರುವ ನಮ್ರತಾ ಅವರು ಮಲ್ಲೇಶ್ವರಂನಲ್ಲಿ ವಿದ್ಯಾಮಂದಿರ ಎಜುಕೇಶನ್ ಸೊಸೈಟಿಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪೂರೈಸಿದ್ದರು. ಪಿಯುಸಿಯಲ್ಲಿ ಸೈನ್ಸ್ ಓದಿದ್ದ ಅವರು, ಬಳಿಕ ಬೆಂಗಳೂರು ಯುನಿವರ್ಸಿಟಿಯ ಕಾನೂನು ಕಾಲೇಜಿನಲ್ಲಿ 2022ನೇ ವರ್ಷದಲ್ಲಿ ಬಿಎ ಎಲ್‌ಎಲ್ ಬಿ ಪೂರೈಸಿದ್ದರು. ಸದ್ಯ ಕರ್ನಾಟಕ ಹೈಕೋರ್ಟಿನಲ್ಲಿ ಜಡ್ಜ್ ಡಾ.ಪ್ರಭಾಕರ ಶಾಸ್ತ್ರಿ ಅವರಲ್ಲಿ ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ ಆಗಿದ್ದಾರೆ. 24 ವರ್ಷ ಎಂಟು ತಿಂಗಳ ಹರೆಯದ ನಮ್ರತಾ ತನ್ನ ಮೊದಲ ಪ್ರಯತ್ನದಲ್ಲಿಯೇ ಜಡ್ಜ್ ಹುದ್ದೆಯ ಪರೀಕ್ಷೆಯನ್ನು ಪಾಸ್ ಮಾಡಿದ್ದು ಅತಿ ಕಿರಿಯ ಜಡ್ಜ್ ಎಂಬ ಶ್ರೇಯಸ್ಸು ತನಗೆ ಸೇರಬೇಕೆಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಅನಿಲ್ ಜಾನ್ ಸಿಕ್ವೆರಾ 25 ವರ್ಷ ಪೂರೈಸಿದ್ದು, ಜಡ್ಜ್ ಹುದ್ದೆಗೇರಿದ ರಾಜ್ಯದ ಅತಿ ಕಿರಿಯ ವ್ಯಕ್ತಿಯೆಂದು ಈ ಮೊದಲು ಹೇಳಲಾಗಿತ್ತು. ನಮ್ರತಾ ಮತ್ತು ಅನಿಲ್ ಸಿಕ್ವೆರಾ ಅವರು ಬೆಂಗಳೂರಿನಲ್ಲಿ ಒಂದೇ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಅನಿಲ್ ಸಿಕ್ವೆರಾ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದರೆ, ನಮ್ರತಾ ಮೊದಲ ಪ್ರಯತ್ನದಲ್ಲಿಯೇ ಸಾಧನೆ ಮಾಡಿದ್ದಲ್ಲದೆ, ರಾಜ್ಯದ ಅತಿ ಕಿರಿಯ ಮಹಿಳಾ ಜಡ್ಜ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

2023ರ ನವೆಂಬರ್ ತಿಂಗಳಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ 33 ಮಂದಿ ತೇರ್ಗಡೆಯಾಗಿರುವ ಬಗ್ಗೆ ಫೆ.23ರಂದು ಹೈಕೋರ್ಟ್ ರಿಜಿಸ್ಟ್ರಾರ್ ಅಧಿಸೂಚನೆ ಪ್ರಕಟಿಸಿದ್ದರು. ಅವರು ಪಡೆದ ಅಂಕದ ಆಧಾರದಲ್ಲಿ ಒಂದರಿಂದ 33ರ ಕ್ರಮಾಂಕದಲ್ಲಿ ಜಡ್ಜ್ ಹುದ್ದೆಗೆ ಆಯ್ಕೆಗೆ ಲಿಸ್ಟ್ ಮಾಡಲಾಗಿತ್ತು. ಅದರ ಪ್ರಕಾರ, ಹರ್ಷಿತಾ ಜಿಎಂ(1), ಝಹೀರಾ ಅತಾನೂರ್(2), ನಮ್ರತಾ ಹೊಸಮಠ(3), ಭುವನೇಶ್ವರಿ ಡಿ(4), ವರ್ಣಿಕಾ ಆರ್(5), ಪುಷ್ಪಾ ಡಿ(6), ಪೂಜಾ ಎಸ್. ಕುಮಾರ್(7), ಸುನಿಲ್ 2.3(8), ಕೃಷ್ಣಪ್ಪ ಪಮ್ಮಾರ, (9), ಗೀತಾ ಡಿ.(10), ಪುನೀತ್ ಬಿಆರ್ (11), ರಂಜಿತ್ ಕುಮಾರ್ (12), ಸುರಕ್ಷಾ ಕೆಕೆ (13), ಶರ್ಮಿಳಾ ಇಜೆ (14), ಶ್ರುತಿ ತೇಲಿ(15), ಪ್ರಹಾನ್ ಸಿಂಗ್ (16), ಮೇಘಾ ಸೋಮನ್ನವರ್(17), ಮಧುಶ್ರೀ ಆ‌ರ್.ಎಂ.(18), ವಿಕಾಸ್ ದಳವಾಯಿ (19), ರಂಜಿತಾ ಎಸ್.(20), ಶ್ರೇಯಾ ಎಚ್.ಜೆ(21), ಧನಂಜಯ್ ಹೆಗ್ಡೆ, (22), ತುಷಾರ್ ಸಂಜಯ್ ಸದಲಗಿ(23), ಐಶ್ವರ್ಯಾ(24), (25), ವಿಜಯಕುಮಾರ್ 4.(26), (27), అనిల ಜಾನ್ ಸಿಕ್ವೇರಾ(28), ದಾನಪ್ಪ (29), ಕೃತಿಕಾ ಪಿ. ಪವಾರ್ (30), ಮಹಾಂತೇಶ ಮಠದ(31) ಭಾಗ್ಯಶ್ರೀ ಮಾದಾರ(32), ಸುಮಾ ಟಿ(33) ಇದ್ದಾರೆ.