ಬೆಂಗಳೂರು: ನೆರೆಯ ಚೀನಾದಿಂದ ಮತ್ತೊಂದು ಮಹಾಮಾರಿ ಇದೀಗ ಕರ್ನಾಟಕ ಸೇರಿದಂತೆ ದೇಶದಲ್ಲಿ ಅಬ್ಬರ ಆರಂಭಿಸಿದೆ. ಪ್ರಮುಖವಾಗಿ ಮಕ್ಕಳಲ್ಲಿ ಈ ವೈರಸ್ ಕಾಣಿಸಿಕೊಳ್ಳುತ್ತಿದೆ ಇದರಿಂದ ಪಾಲಕರು ಆತಂಕ ಪಡುವಂತಾಗಿದೆ. ಚೀನಾ ವೈರಸ್ ಕರ್ನಾಟಕದಲ್ಲೂ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಅಂಗನವಾಡಿ, ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಲು ನಿರ್ಧರಿಸಿದೆ. ತಾತ್ಕಾಲಿಕವಾಗಿ ಅಂಗನವಾಡಿ ಮತ್ತು ನರ್ಸರಿ ತರಗತಿಗಳನ್ನು ಕೆಲಕಾಲ ಮುಚ್ಚಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮಕ್ಕಳಲ್ಲಿ ನೈರ್ಮಲ್ಯ ಕಾಪಾಡಲು ಇದು ಅನಿವಾರ್ಯ ಎಂಬ ಮಾತು ಕೇಳಿ ಬಂದಿದೆ. ಸರ್ಕಾರ ಸದ್ಯದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ HMP ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆಸ್ಪತ್ರೆಗೆ ಹೋಗುವವರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್‌ಗೆ 10 ರಿಂದ 12 ಸಾವಿರ ರೂ. ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ HMP ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎನ್ನುವವರ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದೆ. ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ಹೋಗುವವರು HMP ವೈರಸ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದ್ದು, ಇಂದು ಸಂಜೆಯೊಳಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಅಂಗನವಾಡಿ ರಜೆ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ.