ಬೆಂಗಳೂರು: ಪ್ರಸಕ್ತ ಸಾಲಿಗೆ ಅ.3ರಿಂದ 20ರವರೆಗೆ ದಸರಾ ರಜೆ ಘೋಷಿಸಿ ಸರಕಾರ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ, ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯಾಗಿ ದಸರಾ ರಜೆ ಪ್ರಕಟಿಸಲಾಗಿದೆ. ಈ ಆದೇಶದಂತೆ ಕ್ರಮ ವಹಿಸಲು ಎಲ್ಲ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯ ಎಲ್ಲ ಸರಕಾರಿ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರ ಗಮನಕ್ಕೆ ತರಲು ತಿಳಿಸಲಾಗಿದೆ. ಈ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ, ಈಗ ಕರ್ನಾಟಕದ ಎಲ್ಲ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಲಾಗಿದೆ. 2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇದ್ದು, ಒಟ್ಟು 18 ದಿನ ರಜೆ ಸಿಗಲಿದೆ. ಅ.2 ರಂದು ಗಾಂಧಿ ಜಯಂತಿಯಿದೆ. ಕಾರ್ಯಕ್ರಮದ ಬಳಿಕ ರಜೆ ಆರಂಭವಾಗಲಿದೆ ಎಂದು ಇಲಾಖೆ ತಿಳಿಸಿದೆ.