ವಿಜಯಪುರ: ತಾಳಿಕೋಟೆ ತಾಲ್ಲೂಕಿನ ಬಿಳೆಬಾವಿ ಕ್ರಾಸ್ ಬಳಿ ಕಾರು ಹಾಗೂ ತೊಗರಿ ಕಟಾವು ಮಾಡುವ ಯಂತ್ರದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಐವರು ಸಾವಿಗೀಡಾಗಿದ್ದಾರೆ.

ಅಪಘಾತದ ರಭಸಕ್ಕೆ ಕಾರಲ್ಲಿದ್ದ ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪ ಪಾಟೀಲ (55) ಶಾಂತವ್ವ ಶಂಕರ ಪಾಟೀಲ (45), ಭೀಮಶಿ ಸಂಕನಾಳ (65) ಶಶಿಕಲಾ ಜೈನಾಪುರ (45) ಹಾಗೂ ದಿಲೀಪ ಪಾಟೀಲ (50) ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆ ಅಗ್ನಿ ಗ್ರಾಮದಲ್ಲಿ ವರನಿಗೆ ಕನ್ಯ ನೋಡಲು ಹೋಗಿದ್ದ ಐವರು, ಹುಣಸಗಿಯಿಂದ ತಾಳಿಕೋಟೆ ಮಾರ್ಗವಾಗಿ ತಮ್ಮ ಊರಿಗೆ ಕಾರಿನಲ್ಲಿ ವಾಪಸ್ ಬರುವ ವೇಳೆ ಕ್ರೂಸರ್ ಹಿಂದಿಕ್ಕುವ ಭರದಲ್ಲಿ ತೊಗರಿ ಕಟಾವು ಮಾಡುವ ಮಷಿನ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.

ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಯಂತ್ರದ ಮೂಲಕ ತಾಳಿಕೋಟೆಯ ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಬಸವನಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.